Wednesday, 20 May 2020

ನಂಬಿದೆ ನಿನ್ನ ಪಾದವ - ವೆಂಕಟರಮಣ nambide ninna paadava


ನಂಬಿದೆ ನಿನ್ನ ಪಾದವ  ವೆಂಕಟರಮಣ
ನಂಬಿದೆ ನಿನ್ನ ಪಾದವ \\ ಪ\\
ನಂಬಿದೆ ನಿನ್ನ ಪದಾಂಬುಜಯುಗಳವ
ಇಂಬಿತ್ತು ಸಲಹಯ್ಯ ಶಂಖ-ಚಕ್ರಧರನೆ
ತಂದೆಯು ನೀನೆ ತಾಯಿಯು ನೀನೆ ಬಂಧು ಬಳಗವು ನೀನೆ ||
ಬಂದ ದುರಿತವೆನ್ನ ಹೊಂದಿಕೊಳ್ಳದಂತೆ
ತಂದೆ ಸಲಹೊ ಮುಕುಂದ ಮುರಾರಿ \\1\\
ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು ||
ಗಕ್ಕನೆ ಜ್ಞಾ ನವನಕ್ಕರೆಯಲಿ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣಿಯರಸಾ \\2\\
ಮರೆತು ನಾ ಮಾಯೆಯೊಳು ಮುಳುಗಿದೆ ಅದ ನರಿತು ಅರಿಯದಾದೆ ||

ಮರೆಯದೆ ಎನ್ನನು ಪೊರೆಯೆ ಕೃಪಾನಿಧಿ ವರದ ಶ್ರೀವೆಂಕಟ ಪುರಂದರ ವಿಠಲ \\3\\

ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ |ನಂಬಲಾರದೆ ಕೆಟ್ಟರು ಪ. nambi kettavarunte


ನಂಬಿ ಕೆಟ್ಟವರುಂಟೆ ಕೃಷ್ಣಯ್ಯನ ನಂಬಲಾರದೆ ಕೆಟ್ಟರು \\ಪ.\\
ಅಂಬುಜನಾಭನ ಪಾದವ ನೆನೆದರೆ ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ\\ ಅಪ\\
ಬಲಿಯ ಪಾತಾಳಕಿಳುಹಿ - ಭಕ್ತನ ಬಾಗಿಲವ ಕಾಲುವೆ ನಾನೆಂದ ||
ಛಲದೊಳು ಅಸುರರ ಶಿರಗಳ ತರಿದು ತಾನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ \\1\\
ತರಳ ಪ್ರಹ್ಮಾದಗೊಲಿದು - ಹಿರಣ್ಯಕನ ಉಗುರಿನಿಂದಲೆ ಸೀಳಿದ |
ಕರಿರಾಜಗೊಲಿದು ನೆಗಳು ನುಂಗುತಿರಲಾಗ ಪರಿಹರಿಸಿದ ಜಲದೊಳು ಪೊಕ್ಕು ಶ್ರೀ ಕೃಷ್ಣ \\2\\
ಪಾಂಡವರಿಗೆ ಒಲಿದು  ಕೌರವರನು ತುಂಡು ಛಿದ್ರಮಾಡಿದೆ ||

ಗಂಡರೈವರ ಮುಂದೆ ದ್ರೌಪದಿ ಕೂಗಲು ಕಂಡು ಕರುಣದಿ ಕಾಯ್ದ ಪುರಂದರವಿಠಲನ 3

ನಂಬಬೇಡ ನಾರಿಯರನು nambabeda naariyaranu


ನಂಬಬೇಡ ನಾರಿಯರನು ಹಂಬಲಿಸಿ ಹಾರಯಿಸಬೇಡ
ಅಂಬುಜಾಕ್ಷಿಯರೊಲುಮೆ ಬಯಲು ಡಂಬಕವೆಂದು ತಿಳಿಯಿರೊ \\ಪ.\\
ನೋಟವೆಲ್ಲ ಪುಸಿಯು ಸತಿಯ ರಾಟವೆಲ್ಲ ಸಂಚು ಸನ್ನೆ ಕೂಟವೆಲ್ಲ ಗನ್ನ  ಘಾತುಕ
ನೋಟವೆಲ್ಲ ವಂಚನೆ ವಾತಬದ್ಧ ಹೆಂಗಳಲ್ಲಿ ಕೋಟಲೆಗೊಂಡು ತಿರುಗಬೇಡ
ಮಾಟಗಾತಿಯರೊಲುಮೆ ಬಯಲು ಬೂಟಕವೆಂದು ತಿಳಿಯಿರೊ \\1\\
ಸೋತನೆಂದು ವಿಟಗೆ ದೈನ್ಯ ಮಾತನಾಡಿ ಮರುಳಗೊಳಸಿ
ಕಾತರವ ಹುಟ್ಟಿಸಿ ಆವನ ಮಾತೆ ಪಿತರ ತೊಲಗಿಸಿ
ಪ್ರೀತಿ ಬಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಚಾತಿಕಾರ್ತಿ ಹೆಂಗಳೆಯರ \\2\\
ಧರೆಯ ಜನರ ಮೋಹಕೆಳಸಿ ಭರದಿ ನೆಟ್ಟು ಕೆಡಲುಬೇಡ
ಎರೆಳೆಂಗಳ ಹೆಂಗಳೊಲುಮೆ ಗುರುಳೆ ನೀರ ಮೇಲಿನ
ಮರೆಯಬೇಡ ಗುರುಮಂತ್ರವ ಸ್ಥಿರವಿಲ್ಲದ ಜನ್ಮದಲ್ಲಿ

ಕರುಣನಿಧಿ ಪುರಂದರವಿಠಲನ ಚರಣ ಸ್ಮರಣೆ ಮಾಡಿರೊ \\3\\

ನಂಬದಿರು ಈ ದೇಹ ನಿತ್ಯವಲ್ಲ


ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ \\ಪ.\\
ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು ||
ಹಲವು ವ್ಯಾಧಿಯ ಬೀಡು ಪಂಚಭೂತದನಾಡು ಹುಲುದೇಹವನು ನೆಚ್ಚಿ ಕೆಡಬೇಡ ಮನವೆ \\1\\
ಸತಿಸುತರು ಹಿತರೆಂದು ಮತಿಮರೆತು ಮಮತೆಯಲಿ ಅತಿಕಾಂಕ್ಷಿಯಿಂದ ದುರ್ವಿಷಯ ಬಲಿದು ||
ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ ಗತಿಶೂನ್ಯನಾಗಿ ಕೆಡಬೇಡ ಮನವೆ \\2\\
ಪರರ ನಿಂದಿಸದೆ ಪರವಧಗಳನು ಬಯಸದೆ ಗುರು - ವಿಪ್ರಸೇವೆಯನು ಮಾಡು ಬಿಡದೆ ||

ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಪಾಡು ಪರಮ ಪುರಂದರವಿಠಲನೊಲಿದು ಪಾಲಿಸುವ \\3\\

ಧ್ವಜದ ತಿಮ್ಮಪ್ಪ dhwajada timmappa


ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ \\ಪ.\\
ಬಲದಲಬುಜಭವ ಭವಾದಿಗಳೆಡದಲಿ ಉಲಿವ ವೇದ - ಉಪನಿಷದುಗಳು ||
ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ ಹಲವು ಋಷಿಮುನಿನಿಕರ ಹಿಂದೆ ಬರುತಿರಲು\ 1\\
ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ ಚಿತ್ತಜಾತನು ವ್ಯಜನವ ಬೀಸಲು ||
ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು ಹಸ್ತದ ಕಾಳಂಜಿ ಹರಿಣಾಂಕನು ಬರೆ \\2\\
ವರುಣನು ಸ್ವಾದುಜಲವ ಪಿಡಿದು ಬರೆ ತರುಣಿ ತನಗೆ ಆಧಾರದಂತಿರಲು ||
ಸುರರು ಸುಮನಗಳಿಂದ ಸರ್ವರು ತಮತಮ್ಮ ಪರಿಪರಿ ಆಯುಧಗೊಂಡು ಬಳಸಿಬರೆ \\3\\
ಮಂದರ ಮಧ್ಯಮ ತಾರಕ ಮೋಹನ ದಿಂದ ಗಂಧರ್ವರು ಗಾನಮಾಡೆ ||
ತೋಂಧಿಮಿಧಿಮಿಕೆಂದು ತಾಳಮೇಳದೆ ನಾರಂದ ಪಾಡಲು ಆಡುತಾಡುತ ಬರುತಿರೆ \\4\\
ಲೋಕನಾಯಕ ಲೋಕೈಕ ರಕ್ಷಾಮಣಿ ಸಾಕಾರರೂಪ ಸದ್ಗುಣಭರಿತ ||

ವೆಂಕಟೇಶ ವ್ಯಾಸಮುನಿವರದನಾದ ಕರುಣಾಕರ ಪುರಂದರವಿಠಲನು ಗರುಡ \\5\\


ಧೂಪಾರತಿಯ ನೋಡುವ ಬನ್ನಿ dhooparatiya noduva banni


ಧೂಪಾರತಿಯ ನೋಡುವ ಬನ್ನಿ ನಮ್ಮ ಗೋಪಾಲಕೃಷ್ಣನ ಪೂಜೆಯ ಸಮಯದಿ \\ಪ.\\
ಅಗುರು ಚಂದನ ಧೂಪ ಗುಗ್ಗುಳ ಸಾಮ್ರಾಣಿ ಮಘಮಘಿಸುವ ಧೂಪದಾರತಿಯು ||
ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮ ಜಗನ್ನಾಥ ಕೃಷ್ಣನ ದೇವರ ಪೂಜೆಯ \\1\\
ಮದ್ದಳೆ ಜಾಂಗಟಿ ತಾಳ ತಮ್ಮಟೆ ಭೇರಿ ತದ್ಧಿಮಿ ಧಿಮಿಕೆಂಬ ನಾದಗಳು ||
ಹೊದ್ದಿದ ಧವಳ ಶಂಖದ ಘೋಷಣಂಗಳ ಪದ್ಮನಾಭನ ದಿವ್ಯ ದೇವರ ಪೂಜೆಯ \\2\\
ಢಣ ಢಣ ಢಣರೆಂಬ ತಾಳ ದಂಡಿಗೆ ವೇಣು ಢಣಕು ಧಿಮಿಕು ಎಂಬ ಮದ್ದಳೆಯು ||
ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳ ಘನರಾಗದಿಂದಲಿ ಹಾಡುತ ಪಾಡುತ \\3\\
ಮುತ್ತು ಛತ್ರ ಚಾಮರ ಪತಾಕ ಧ್ವಜ ರತ್ನ ಕೆಚ್ಚಿದ ಪದಕ ಹಾರಗಳು ||
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ ಸತ್ಯಭಾಮೆ ರುಕ್ಮಿಣಿಯರರಸನ \\4\\
ಹರ ಬ್ರಹ್ಮ ಸುರಪತಿ ದೇವತೆ ಮೊದಲಾದ ಪರಮ ಪಾವನ ಮೂರ್ತಿ ಪುರುಷೋತ್ತಮನ ||

ಪರದೈವತವೆಂದು ಬಿರುದು ಪೊಗಳಿಸಿಕೊಂಬ ಪುರಂದರವಿಠಲನ ಪೂಜೆಯ ಕಾಲದ \\5\\

ಧಾನ್ಯ ದೊರಕಿತು ಎನಗೆ dhanya dorakito enage


ಧಾನ್ಯ ದೊರಕಿತು ಎನಗೆ ಧನವು ದೊರಕಿತು\\ ಪ\\
ಓಣಿಯೊಳಗೆ ಹೋದ ಮಾಣಿಕ್ಯದ ಹರಳು ದೊರಕಿತೋ \\ಅ.ಪ\\
ಕಟ್ಟಿ ಹಗೆಯ ಹಾಕುವುದಲ್ಲ ಒಟ್ಟಿ ಕೆಸರ ಬಡಿಯುವುದಲ್ಲ ||
ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ \\1\\
ಹರಿದು ಗೊಣಸು ಹಚ್ಚುವುದಲ್ಲ ಮುರಿದು ಸಣ್ಣಗೆ ಮಾಡುವುದಲ್ಲ ||
ಅರಿದು ಇದನು ಪೇಟೆಗೆ ಒಯ್ದರೆ ಕರೆದು ಬೆಲೆಯನು ಕಟ್ಟುವುದಲ್ಲ\\2\\
ಪಾಲು ಪಸುಗೆ ಹಂಚುವುದಲ್ಲ ಮೇಲೆ ಚಾರರು ಒಯ್ಯುವುದಲ್ಲ ||
ಶ್ರೀಲೋಲ ಪುರಂದರ ವಿಠಲನ ಮೂಲನಾಮ ದೊರಕಿತಲ್ಲ\\3\\


ಧರ್ಮವೇ ಜಯವೆಂಬ ದಿವ್ಯ ಮಂತ್ರ dharmave jayawemba divya mantra


ಧರ್ಮವೇ ಜಯವೆಂಬ ದಿವ್ಯ ಮಂತ್ರ ಮರ್ಮಗಳನೆತ್ತಿದರೆ ಒಳಿತಲಾ ಕೇಳಿ\\ ಪ.\\
ವಿಷವನುಣಿಸಿದಗೆ ಷಡುರಸವನುಣಿಸಲುಬೇಕು ದ್ವೇಷಮಾಡುವನ ಪೋಷಿಸಲು ಬೇಕು ||
ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |ಸು ಹೀರಿದನ ಹೆಸರ ಮಗನಿಗಿಡಬೇಕು \\1\\
ಹಿಂದೆ ನಿಂದಿಸುವರನು ವಂದಿಸುತಲಿರಬೇಕು ಬಂಧಿಸಿದವನ ಕೂಡ ಬೆರೆಯಬೇಕು ||
ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |ಕೊಂದವನ ಗೆಳತನವ ಮಾಡಬೇಕಯ್ಯ \\2\\
ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು ಕಂಡರಾಗದವರ ತಾ ಕರಿಯಬೇಕು ||

ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ ಖಂಡ ಮಹಿಮೆಯನರಿತು ನೆನೆಯಬೇಕಯ್ಯ\\3\\

ಧರ್ಮವೆಂಬ ಸಂಬಳವ dharmavemba sambalava


ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ |ಹೆಮ್ಮೆಯಿಂದ ಈ ಶರೀರ ನಂಬಬೇಡಿ ಕಾಣಿರೊ\\ಪ.\\

ಅಟ್ಟ ಅಡಿಗೆ ಉಣಲು ಕೊಡನು ಕೊಟ್ಟ ಸಾಲ ಕೇಳಗೊಡನು |
ಪೆಟ್ಟಿಗೆ ತುಂಬ ಹಣವು ಇದ್ದರೆ ಕೊಟ್ಟೆನೆಂದರೆ ಬಿಡನು ಯಮನು \\1\\
ಮಾಳಿಗೆ ಮನೆಯ ಇರಲು ಜಾಳಿಗೆ ತುಂಬ ಹೊನ್ನು ಇರಲು |
ಆಳುಮಂದಿ ಕುದುರೆ ಇದ್ದರೆ ಬೀಳುಗೊಡದೆ ಯಮನು ಬಿಡನು \\2\\
ವ್ಯರ್ಥವಾದ ಈ ಶರೀರ ಸತ್ಯವೆಂದು ನಂಬಬೇಡಿ |

ಕರ್ತು ಪುರಂದರವಿಠಲರಾಯನ ಭಕ್ತಿಯಿಂದ ನೆನೆಯಿರೊ \\3\\

ಧರ್ಮಕ್ಕೆ ಕೈಬಾರದೀ ಕಾಲ dharmakke kai baaradi kala


ಧರ್ಮಕ್ಕೆ ಕೈಬಾರದೀ ಕಾಲ  ಪಾಪ ಕರ್ಮಕ್ಕೆ ಮನ ಬಾಹುದೀ ಕಲಿಕಾಲ  \\ಪ.\\

ದಂಡದೋಷಕೆ ಉಂಟು ಪುಂಡುಪೋಕರಿಗುಂಟು | ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||
ಭಂಡೆಯರಿಗುಂಟು ದಿಂಡೆಯರಿಗುಂಟು  ಬೇಡಿ ಕೊಂಡಿವರಿಗಿಲ್ಲವು ಈ ಕಲಿಕಾಲ \\1\\
ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು | ಹೆತ್ತತಾಯಿಗಿಲ್ಲ ಈ ಕಲಿಕಾಲ ||
ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ ಉತ್ತಮರಿಗೆ ಇಲ್ಲವೀ ಕಲಿಕಾಲ \\2\\
ಹುಸಿದಿಟವಾಯಿತು ರಸ - ಕಸವಾಯಿತು ಮಸಿ ಮಾಣಿಕವಾಯಿತೀ ಕಾಲ ||

ವಸುಧೆಯೊಳಗೆ ನಮ್ಮ ಪುರಂದರವಿಠಲನ ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ\\ 3\\


ಧರ್ಮ ದೊರಕುವದೇ |dharma dorakuvade


ಧರ್ಮ ದೊರಕುವದೇ ದುಷ್ಕರ್ಮಿಸತ್ತಿಯೊಳು
ಪುರುಷಾಧಮನಿಗೆ ಧರ್ಮ ದೊರಕುವದೆ \\ಪ.\\
ಧನವಿದ್ದರೇನಯ್ಯ ಮನವಿಲ್ಲವು  ಮನವಿದ್ದರೇನಯ್ಯ ಧನವಿಲ್ಲವು |
ಧನವು ಮನವು ಯರಡುಂಡ್ಯಾದ ಮನುಜಗೆ ಅನುಕೂಲವಾದಂಥ ಸತಿಯಿಲ್ಲವಯ್ಯ \\1\\
ಧರ್ಮಯಾಗ ಮಾಡವ ಧರ್ಮ ನಾಳೆಯಾದೆನಬ್ಯಾಡನಾಳ್ಯಾರೊ
\ನಾವ್ಯಾರೊ ಯಲೊ ಮಾನವಾ 
 ಊಳಿಗದವ ಬಂದು ಬಾಬಾರೆಂದೆಳವಾಗ ಆಗ ಮಾಡುವೆನೆಂದರೆ
ದೊರಕುವುದೇ ಧರ್ಮ\\2\\
ಬಾಡಿಗೆ ಮನೆಯಂತೆಯೊ ದೇಹವ ನಚ್ಚಿ ಮಾಡುವೆ ಪರಿಪರಿಯಾಗವನು 
 ಈ ಬೀಡಬಿಟ್ಟು ಆ ಬೀಡ ಹೋದ ಮೇಲೆ ಆಗ ಮಾಡುವೆನೆಂದರೆ ದೊರಕುವದೆ \\3\\
ತನ್ನ ಕಣ್ಣ ಮುಂದೆ ಹೋಹ ಜೀವವ ಕಂಡು ಇನ್ನು ನಾಚಿಕೆಯಿಲ್ಲವೆ ತನಗೆ | 
ನನ್ನದು ನನ್ನದುಯೆಂಬ ಭ್ರಾಂತಿಯ ಬಿಟ್ಟು ಕುನ್ನಿ ದೇಹವನಚ್ಚಿ ಕೆಡಬ್ಯಾಡ ಮನುಜ\\4\\

ವಂದಾನೊಂದು ಪರಿಯಲ್ಲಿ ತೊಳಲಿ ಬಳಲಿ ಜೀವ ಮುಂದನ ಜನ್ಮಕೆ ಸಾಧನವು
ತಂದೆ ಶ್ರೀ ಪುರಂದರ ವಿಠಲರಾಯನನ ಸಂದೇಹವಿಲ್ಲದೆ ನೆನೆ ಕಂಡ್ಯಾ ಮನುಜ \\5\\

ಧರಣಿಗೆ ದೊರೆಯೆಂದು ನಂಬಿದೆ dharanige doreyandu nambide


ಧರಣಿಗೆ ದೊರೆಯೆಂದು ನಂಬಿದೆ  ಇಂಥ  ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ \\ಪ\\
ಕಾಡಿಬೇಡುವರಿಗೆ ಕೊಡಲಾರದೆ ಅಂಜಿ ಓಡಿ ನೀರೊಳು ಸೇರಿಕೊಂಡೆ ಬೇಗ ||
ಹೇಡಿಯ ತೆರದಲಿ ಮೋರೆಯ ತೋರದೆ  ಓಡಿ ಅರಣ್ಯದಿ ಮೃಗಗಳ ಸೇರಿದೆ\\1\\
ಬಡವರ ಬಿನ್ನಪ ಲಾಲಿಸದಲೆ ಹಲ್ಲ ಕಡುಕೋಪದಲಿ ತೆರೆದಂಜಿಸಿದೆ ||
ತಡೆಯದೆ ಭಿಕ್ಷುಕನಾದರು ಬಿಡರೆಂದು  ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆಯೊ\\2\\
ಉತ್ತಮನೆಂದರೆ ಮತ್ತೆ ಚೋರನಾದೆ ಬತ್ತಲೆ ನಿಂತು ತೇಜಿಯನೇರಿದೆ |

ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ ಚಿತ್ತಜ ಜನಕ ಶ್ರೀ ಪುರಂದರವಿಠಲನೆ \\3\\

ಧನವಗಳಿಸಬೇಕಿಂತಹದು dhanavagalisa


ಧನವಗಳಿಸಬೇಕಿಂತಹದು ಈಜನರಿಗೆ ಕಾಣಿಸದಂತಹದು \\ಪ.\\
ಕೊಟ್ಟರೆ ತೀರದಂತಹದು ತನ್ನ ಬಿಟ್ಟು ಅಗಲಿ ಇರದಂತಹದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ ಮುಟ್ಟರು ಆರು ಅಂತಹದು \\1\\
ಕರ್ಮವ ನೋಡಿಸುವಂತಹದು ಧರ್ಮವ ಮಾಡಿಸುವಂತಹದು
ನಿರ್ಮಲವಾಗಿದೆ ಮನಸಿನೊಳಗೆ ನಿಜ ಧರ್ಮವ ತೋರಿಸುವಂತಹದು\\ 2\\
ಅಜ್ಞಾನವು ಬಾರದಂತಹದು - ನಿಜ ಸುಜ್ಞಾನವ ತೋರುವಂತಹದು

ವಿಜ್ಞಾನಮೂರ್ತಿ ಪುರಂದರವಿಠಲನ ಪ್ರಜ್ಞೆಯನ್ನು ಕೊಡುವಂತಹದು \\3\\

ದೇಹವೇಕೆ ನಮಗೆ ದೇಹ dehaveke namage deha


ದೇಹವೇಕೆ ನಮಗೆ ದೇಹ ದೇಹ ಸಂಬಂಧಗಳೇಕೆ ಆಹುದೇನೊ
ಹೋಹುದೆನೊ ಇದರಿಂದ ಹರಿಯೆ \\ಪ.\\
ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ ಮುಚ್ಚಿ ಹೂಳಿದ ಹೊನ್ನು ಹಣವೇತಕೆ |
ಪಚ್ಚೆ ಮಾಣಿಕ ವಜ್ರ ವೈಡೂರ್ಯವೇತಕೆ  ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ \\1\\
ಹೆಂಡಿರು ಮಕ್ಕಳು ಏಕೆ  ಹಣ ಹೊನ್ನು ಎನಲೇಕೆ  ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||
ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ
ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ \\2\\
ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ ಚೆಂದುಳ್ಳ ವಿಹಿತ ಕರ್ಮಗಳೇತಕೆ |

ಇಂದಿರೇಶ ನಮ್ಮ ಪುರಂದರವಿಠಲನ ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ \\3\\

ದೇವಕಿನಂದ ಮುಕುಂದ ಪ devakimanda Mukunda


ದೇವಕಿನಂದ ಮುಕುಂದ ಪ
ನಿಗಮೋದ್ಧಾರ - ನವನೀತ ಚೋರ |
ಖಗಪತಿ ವಾಹನ ಜಗದೋದ್ಧಾರ 1
ಶಂಖ - ಚಕ್ರಧರ - ಶ್ರೀ ಗೋವಿಂದ |
ಪಂಕಜಲೋಚನ ಪರಮಾನಂದ 2
ಮಕರಕುಂಡಲಧರ - ಮೋಹನವೇಷ |
ರುಕುಮಿಣಿವಲ್ಲಭ ಪಾಂಡುವಪೋಷ3
ಕಂಸಮರ್ದನ - ಕೌಸ್ತುಭಾಭರಣ |
ಹಂಸ - ವಾಹನ ಪೂಜಿತ ಚರಣ4
ವರವೇಲಾಪುರ ಚೆನ್ನಪ್ರಸನ್ನ |
ಪುರಂದರವಿಠಲ ಸಕಲಗುಣ ಪೂರ್ಣ5


ದೇವ ಬಂದ ನಮ್ಮ ಸ್ವಾಮಿ ಬಂದನೋ deva banda namma


ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ ಪ
ಉರಗಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ1
ಮಂದರೋದ್ಧಾರ ಬಂದ ಮಾಮನೋಹರ ಬಂದ
ವೃಂದಾವನ ಪತಿ ಗೋವಿಂದ ಬಂದ 2
ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದ3
ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದ 4
ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದನಗೆ ಮುಖ ಪುರಂದರ ವಿಠಲ ಬಂದನೋ 5


ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯ drishti ninna paadadalli


ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯ
ದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.
ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವ
ಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪ
ದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀ
ಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||
ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲು
ಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1
ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದು
ಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||
ಪಟ್ಟೆ - ಪಟ್ಟಾವಳಿ ಬೇಡಲಿಲ್ಲ ನಾನು ಎನ್ನ
ಗುಟ್ಟು ಅಭಿಮಾನಗಳ ಕಾಯೋ ನೀನು 2
ನಟ್ಟನಡು ನೀರೊಳೀಸಲಾರೆ ನಾನು ಎತ್ತಿ
ಕಟ್ಟೆಯ ಸೇರಿಸಬೇಕಯ್ಯ ನೀನು ||
ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನು
ಸುಟ್ಟು ಬಿಡು ಪುರಂದರ ವಿಠಲ ನೀನು 3


ದೂರ ಮಾಡುವರೇನೆ ರಂಗಯ್ಯನ doora maaduvarene rangayyana


ದೂರ ಮಾಡುವರೇನೆ ರಂಗಯ್ಯನ ಪ
ದೂರು ಮಾಡುವರೇನೆ | ಚೋರನೆಂದಿವನನ್ನು |
ಮೂರು ಲೋಕವನು ತಾ | ಪಾಡುವ ರಂಗಯ್ಯನ 1
ನಂದ ಗೋಕುಲದಲ್ಲಿ ಕಂದರೊಡಗೂಡಿ ಆ-|
ನಂದದಿಂದಲಾಡುವ | ಕಂದ ರಂಗಯ್ಯನ 2
ಗೊಲ್ಲರ ಮನೆಯಲ್ಲಿ | ಕಳ್ಳತನದಲಿ ಪೊಕ್ಕು |
ಗಲ್ಲವನು ಪಿಡಿದು ಮುದ್ದಿಡುವ ರಂಗಯ್ಯನೆಂದು 3
ಕಾಮಾಂಧಕಾರದಲಿ | ಕಳವಳಗೊಳಿಸಿದ |
ಶ್ಯಾಮಸುಂದರ ರಂಗ | ಸೋಲಿಸಿ ಪೋದನೆಂದು 4
ಮಂಗಲ ಮೂರುತಿ ಪು | ರಂದರವಿಠಲನು |
ರಂಗ ಮಂಚದಲಿ ನೆರೆದು | ಹಿಂಗಿ ಪೋದನೆಂದು 5


ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ? duritavettanado durgatiyu


ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?
ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.
ಸ್ನಾನವೇತಕೆ ಸಂಧ್ಯಾ ಜಪತಪವೇತಕೆ
ಮೌನವೇತಕೆ ಮಾಸವ್ರತವೇತಕೆ ||
ಮಾನಸದಲಿ ವಿಷ್ಣುಧ್ಯಾನವ ಮಾಡುವ
ಜÁ್ಞನವಂತರ ಸಂಗಸುಖದೊಳಿಪ್ಪವರಿಗೆ 1
ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆ
ಗೋತ್ರಧರ್ಮದ ಪುಣ್ಯ ಫಲವೇತಕೆ ? ||
ಸೂತ್ರದಿ ಜಗವ ಮೋಹಿಸುವ ಮುರಾರಿಯ
ಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ 2
ಅಂಗದಂಡನೆ ಏಕೆ ಆತ್ಮಗಾಸಿಯು ಏಕೆ
ತಿಂಗಳ ಚಾಂದ್ರಾಯಣವೇತಕೆ ? ||
ಮಂಗಳ ಮಹಿಮ ಶ್ರೀ ಪುರಂದರವಿಠಲನ
ಹಿಂಗದರ್ಚನೆ ಮಾಡುವ ಭಕ್ತ ಜನರಿಗೆ 3


ದಾಸರ ನಿಂದಿಸಬೇಡಲೊ ಪ್ರಾಣಿ ಹರಿ


ದಾಸರ ನಿಂದಿಸಬೇಡಲೊ ಪ್ರಾಣಿ - ಹರಿ
ದಾಸರ ನಿಂದಿಸಬೇಡ ಪ.
ಮೋಸವಾಯಿತೊ ಮನದೊಳು ಗಾಢ |
ಲೇಸಾಗಿ ಇದ ತಿಳಕೊ ಮೂಢ ಅಪ
ರಾಮನ ನಿಂದಿಸಿ ರಾವಣ ಕೆಟ್ಟ |
ತಮ್ಮಗಾಯಿತು ಸ್ಥಿರಪಟ್ಟ ||
ತಾಮಸದಿಂದಲಿ ಕೌರವ ಕೆಟ್ಟ |
ಧರ್ಮಗೆ ರಾಜ್ಯವ ಬಿಟ್ಟ 1
ಮನದೊಳಗಿನ ವಿಷಯದ ವಿಷ ಬಿಟ್ಟು |
ಅನುದಿನ ಹರಿಯ ನೆನೆಯಿರಣ್ಣ ||
ಸನಕಾದಿವಂದ್ಯನ ಪೂಜಿಸಿದರೆ ನೀವ್ |
ಘನ ಪದವಿಯ ಕಾಣುವಿರಣ್ಣ 2
ಕನಕದಾಸನು ಕಬ್ಬಲಿಗನು ಎಂದು |
ಅಣಕಿಸಿ ನುಡಿಬೇಡಿರಣ್ಣ |
ಜನರಂತೆ ನರನಲ್ಲ ತುಂಬುರನೀತನು |
ಜನಕಜೆರಮಣನ ಪಾದಸೇವಕನು 3
ಉಡಿಯ ಒಳಗೆ ಕಿಡಿ ಬಿದ್ದರೆ ಅದು ತಾ |
ಸುಡದನಕಾ ಬಿಡದಣ್ಣ ||
ಬಡವನಾಗಿ ಕೆಡುಬುದ್ದಿಯ ಬಿಟ್ಟು |
ನಡೆಯ ಕಂಡು ಪಡೆದುಕೊಳ್ಳಣ್ಣ 4
ದೇವಕಿ ಸೆರೆಯನು ಬಿಡಿಸಿದ ದೇವನ |
ಸೇವಕರು ನರರೆ ನಿಮಗವರು ||
ಭಾವಜನಯ್ಯನ ಪದವ ನೆನೆದರೆ |
ಪಾವನ ಮಾಡುವ ಪುರಂದರವಿಠಲ 5


ದಾಸನೆಂತಾಗುವೆನು ಧರೆಯೊಳಗೆ ನಾನು dasanentaguvenu dhareyolage


ದಾಸನೆಂತಾಗುವೆನು ಧರೆಯೊಳಗೆ ನಾನು |
ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.
ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |
ಗೋಟಂಚುಧೋತರ ಮುಡಿಯನುಟ್ಟು ||
ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |
ಬೂಟಕತನ ನೋಡಿ ಭ್ರಮಿಸದಿರಿ ಜನರೆ 1
ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |
ವ್ಯರ್ಥವಾಯಿತು ಜನ್ಮ ವಸುಧೆಯೊಳು ||
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |
ಸತ್ಯ - ಶೌಚಗಳರಿಯೆ ಸಜ್ಜನರು ಕೇಳಿ 2
ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |
ಸಂಧ್ಯಾನ - ಜಪ - ತಪವೊಂದನರಿಯೆ ||
ಒಂದು ಸಾಧನ ಕಾಣೆ ಪುರಂದರವಿಠಲನ |
ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3


ದಾಸನ ಮಾಡಿಕೋ ಎನ್ನ - ಇಷ್ಟು dasana maadiko enna


ದಾಸನ ಮಾಡಿಕೋ ಎನ್ನ - ಇಷ್ಟು
ಗಾಸಿ ಮಾಡುವುದೇಕೆ ದಯದಿ ಸಂಪನ್ನ ಪ
ದುರುಳ ಬುದ್ದಿಗಳೆಲ್ಲ ಬಿಡಿಸೋ - ನಿನ್ನ
ಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||
ಚರಣದ ಸೇವೆಯ ಕೊಡಿಸೋ - ಅಭಯ-
ಕರ ಮೇಲಿನ ಕುಸುಮ ಶಿರದ ಮೇಲಿರಿಸೋ 1
ದೃಢಭಕ್ತಿಯಿಂದ ನಾ ಬೇಡಿ - ನಿನ್ನ
ಅಡಿಯೊಳೆರಗುವೆನಯ್ಯ ಅನುದಿನ ಪಾಡಿ ||
ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಪರಭಕ್ತಿ ಮನ ಮಡಿ ಮಾಡಿ 2
ಮೊರೆಹೊಕ್ಕವರ ಕಾವ ಬಿರುದು ನೀನು
ಕರುಣದಿ ರಕ್ಷಣೆ ಮಾಡೆನ್ನ ಪೊರೆದು ||
ದುರಿತ ರಾಶಿಗಳೆಲ್ಲ ತರೆದು ಒಡೆಯ
ಪುರಂದರವಿಠಲನೆ ಹರುಷದಿ ಕರೆದು 3


ದಾಸನ ಮಾಡಿಕೊ ಎನ್ನ - ದಿವ್ಯ dasana maadiko enna


ದಾಸನ ಮಾಡಿಕೊ ಎನ್ನ - ದಿವ್ಯ
ಸಾಸಿರ ನಾಮದ ವೆಂಕಟಭೂಪರನ್ನ ಪ
ಭವಭಯ ದುಃಖವ ಬಿಡಿಸೋ- ನಿನ್ನ
ಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ||
ಆವಾಗಲೂ ನಿನ ನಾಮ ನುಡಿಸೋ - ನಿನ್ನ
ಚರಣ ಕಮಲದಲ್ಲಿ ಆರಡಿಯೆನಿಸೊ 1
ಗಂಗೆಯ ಪಡೆದಂಥ ಪಾದ ವರ
ಶೃಂಗಾರ ಲಕ್ಷ್ಮಿ ಸ್ಮರಿಸುವಂಥ ಪಾದ ||
ಬಂಗಾರ ರಂಜಿತ ಪಾದ - ಹರಿ
ಮಂಗಳ ಸದ್ಗತಿಗೆ ಚಂದಿರನಾದ 2
ಸೆರಗೊಡ್ಡಿ ನಾ ಬೇಡಿಕೊಂಬೆ - ನಿನ್ನ
ಹರವಾಣದೆಂಜಲ ನಾನು ಉಂಡೇನೆಂದೆ ||
ಬಿರುದು ನಿನ್ನದು ಹುಸಿ ಮಾಡದೆ - ನಮ್ಮ
ಪುರಂದರ ವಿಠಲ ದಯಮಾಡೊ ತಂದೆ 3


ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ dasa sheshadriya vasa


ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ |
ದಾಸನನು ಕರೆದೊಯ್ದು ||
ಸಾಸಿರನಾಮ ವಿಲಾಸನ ಮೂರ್ತಿಯ |
ಲೇಸಾಗಿ ತೋರೆನಗೆ ಪ
ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ |
ಶಿರದ ಅಂದದ ದೇವನ ||
ಉರುವ ಶಾಪಕೆ ತಾನು ಕಿರಿದಾಗಿ ಇರುವನ |
ಶಿರದೊಳು ಧರಿಸಿದನ ||
ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು |
ಸ್ಥಿರವಾಗಿ ನೆಲಸಿಪ್ಪನ ||
ಕರುಣವಾರಿಧಿ ವೆಂಕಟೇಶನ ಚರಣವ |
ಕರೆದೊಯ್ದು ತೋರೆನಗೆ 1
ವಾರಿಯೊಳುದಿಸಿದ ನಾರಿಯ ಮಧ್ಯದಿ |
ಏರಿಯೆ ಕುಳಿತವನ ||
ವಾರಿಜ ವದನದಿ ತೋರಿದ ಸಾರದಿ |
ಮೂರೊಂದು ಪೆಸರವನ ||
ಮೇರುವಿನಗ್ರದಿ ಊರಿದ ಚರಣವ |
ಸಾರಿದವರ ಜೀವನ ||
ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪ-||
ದಾರವಿಂದವ ತೋರೆನಗೆ 2
ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ |
ಮಾತೆಯ ಸಲಹಿದನ ||
ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು |
ಘಾತಿಸಿ ತರಿದವನ ||
ನೂತನವಾಗಿಹ ನಾಮ ಶೈಲದ ಮೇಲೆ |
ಕಾತರದೊಳು ನಿಂದನ ||
ಪಾತಕನಾಶನ ಶ್ರೀವೆಂಕಟೇಶನ |
ರೀತಿಯ ತೋರೆನಗೆ 3
ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ |
ವಶತಪ್ಪಿ ನಡೆವವನ ||
ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು |
ಎಸೆವ ಮಹಾವೀರನ ||
ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು |
ಕುಶಲದಿ ನಿಂದವನ ||
ನಸುಮುದ್ದು ಶ್ರೀ ವೆಂಕಟೇಶನ ಚರಣದ |
ಬಿಸರುಹ ತೋರೆನಗೆ 4
ಪಾದ ನಾಲ್ಕನು ಮೋದಿನಿಯೊಳಗೂರಿಯೆ |
ಆದರಿಸುತ ಬಪ್ಪನ ಮೇ ||
ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ |
ಕಾದು ಕೊಳ್ಳುತಲಿಪ್ಪನ ||
ಆದಿಯ ನಾಮಕ್ಕೆ ಅದ್ರಿಯನೊಡಗೊಂಡು |
ಹಾದಿಯನಿತ್ತವನ ||
ಸಾಧಿಸಿ ಇಂತಹ ಶ್ರೀ ವೆಂಕಟೇಶನ |
ಪಾದವ ತೋರೆನಗೆ 5
ಆದಿನಾರಾಯಣನೆಂಬ ಪರ್ವತನು |
ಭೇದಿಸಿ ನಿಂತವನ ||
ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |
ಪಾದವನೂರಿದನ ||
ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |
ಕಾದುಕೊಳ್ಳುತಲಿಪ್ಪನ - ವಿ ||
ನೋದ ಮೂರುತಿಯಾದ ಶ್ರೀ ವೆಂಕಟೇಶನ |
ಪಾದವ ತೋರೆನಗೆ 6
ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ |
ಪುತ್ರಿಯ ತಂದವನ ||
ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ |
ನಿತ್ಯದೊಳಿರುತಿಪ್ಪನ ||
ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ |
ಪುತ್ರನೆಂದೆನಿಸಿದನ ||
ಹತ್ತಿರ ಕರೆದೊಯ್ದು ಪುರಂದರವಿಠಲನ |
ನಿತ್ಯದಿ ತೋರೆನಗೆ 7


ದಾರಿಯ ತೋರೊ ಮುಕುಂದ ಹರಿ daariya toro mukunda hari


ದಾರಿಯ ತೋರೊ ಮುಕುಂದ - ಹರಿ-|
ನಾರಾಯಣ ಗೋವಿಂದ ಪ
ಬಂದೆನು ಬಹುಜ್ಮನದಲಿ -ನಾ-|
ಬಂಧನದೊಳು ಸಿಲುಕುತಲಿ ||
ಮುಂದಿನದಾವುದು ಪಯಣ -ತೋರೊ-|
ಇಂದು ನೀ ಇಂದಿರೆರಮಣ 1
ಗತಿಯಿಲ್ಲದವರಿಗೆ ನೀನೆ -ಸದ್-|
ಗತಿಯೆಂದು ಸ್ತುತಿಮಾಡಿದೆನೊ ||
ಗತಿಯೆಂದು ನಂಬಿದೆ ನಿನ್ನ |
ಸತುವ ತೋರು ನರಹರಿಯೆ ಗೋವಿಂದ2
ಮಡವಿನೊಳಗೆ ಧಮುಕಿದೆನೆ -ಇನ್ನು-
ಕಡಹಾಯಿಸುವರ ನಾ ಕಾಣೆ ||
ಹಡೆದ ತಾಯಿ - ತಂದೆ ನೀನೆ -ಕೈ-|
ಹಿಡಿದು ಸಲಹೊ ಎನ್ನೊಡೆಯ ಮುರಾರಿ3
ಮಿಕ್ಕಿ ಬರುವ ಹೊಳೆಯೊಳಗೆ -ನಾನು-|
ಸಿಕ್ಕಿದೆ ನಡುನೀರೊಳಗೆ ||
ಕಕ್ಕುಲಾತಿ ನಿನಗಿರದೆ |
ಭಕ್ತವತ್ಸಲ ನೀ ದಯಮಾಡೋ 4
ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|
ರಕ್ಷಿಸಿ ಸಲಹಬೇಕು ||
ಅಕ್ಷಯ ಅನಂತ ಮಹಿಮನೆ - ನೀನು |
ಪಕ್ಷಿವಾಹನನೆ ಪುರಂದರ ವಿಠಲ 5


ದಾರಿ ಯಾವುದಯ್ಯ ವೈಕುಂಠಕೆ daari yavudayya vaikuntake


ದಾರಿ ಯಾವುದಯ್ಯ ವೈಕುಂಠಕೆ
ದಾರಿ ತೋರಿಸಯ್ಯಾ ಪ
ದಾರಿ ಯಾವುದಯ್ಯಾ ದಾರಿ ತೋರಿಸು ಆ
ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ಅ.ಪ
ಬಲುಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ ||
ಬಳಲುತ ತಿರುಗಿದೆ ದಾರಿಯ ಕಾಣದೆ
ಹೊಳೆಯುವ ದಾರಿಯ ತೋರೊ ನಾರಾಯಣ 1
ಪಾಪವ ಪೂರ್ವದಲಿ ಮಾಡಿದುದಕೆ
ಲೇಪವಾಗಿರೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪ ನಾರಾಯಣ 2
ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ||
ಪನ್ನಗಶಯನ ಶ್ರೀ ಪುರಂದರ ವಿಠಲ
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3


ದಾರಿ ಏನಿದಕೆ ಮುರಾರಿ daari enidake murari.


ದಾರಿ ಏನಿದಕೆ ಮುರಾರಿ - ನೀ ಕೈಯ ಹಿಡಿಯದಿದ್ದರೆ-|
ದಾರಿ ಏನಿದಕೆ ಮುರಾರಿ? ಪ
ಕಷ್ಟ-ಕರ್ಮಂಗಳ ಎಷ್ಟಾದರು ಮಾಳ್ಪೆ |
ಎಷ್ಟಾದರೂ ನುಡಿದೆ ಗುರುಹಿರಿಯರ ||
ದುಷ್ಟರ ಸಂಗವ ಬಹಳ ಮಾಡಿದರಿಂದ |
ಶಿಷ್ಟರ ಸೇವೆಯೆಂದರಾಗದೆನಗೆ 1
ಪರರ ದೂಷಣೆ ಪರಪಾಪಂಗಳನೆಲ್ಲ |
ಪರಿಪರಿಯಲ್ಲಿ ಆಡಿಕೊಂಬೆ ನಾನು ||
ಹರಿನಾಮಾಮೃತವ ಹೇಳದೆ ಕೇಳದೆ |
ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ 2
ಪಾತಕ ಕರ್ಮಗಳ ಮಾಡಿದಜಾಮಿಳಗೆ |
ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ||
ನೂತನವೇಕಿನ್ನು ಸೂರ್ಯ ಮಂಡಲ |
ರೀತಿಯಾದನು ಸಿರಿಪುರಂದರವಿಠಲ 3


ದಾನವನ ಕೊಂದದ್ದಲ್ಲ ಕಾಣಿರೊ danavana kondaddalla kaaniro


ದಾನವನ ಕೊಂದದ್ದಲ್ಲ ಕಾಣಿರೊ |
ನಾನಾ ವಿನೋದಿ ನಮ್ಮ ತೊರವೆಯ ನರಸಿಂಹ ಪ.
ಅಚ್ಚ ಪ್ರಹ್ಲಾದನೆಂಬ ರತ್ನವಿದ್ದ ಒಡಲೊಳು |
ಬಿಚ್ಚಿ ಬಗಿದು ನೋಡಿದನಿನ್ನೆಷ್ಟು ಇದ್ದಾವೆಂದು 1
ನಂಟುತನ ಬೆಳೆಯಬೇಕೆಂದು ಕರುಳ ಕೊರಳೊಳು |
ಗಂಟುಹಾಕಿಕೊಂಡನೆಷ್ಟು ಸ್ನೇಹಸಂಬಂಧದಿಂದ 2
ಸಿರಿಮುದ್ದು ನರಸಿಂಹ ಪ್ರಹ್ಲಾದಪಾಲಕ |
ಉರಿಮೋರೆ ದೈವ ನಮ್ಮ ಪುರಂದರ ವಿಠಲ 3


ದಾತ ಹರಿಯು ದಯ data hariya daya


ದಾತ ಹರಿಯು ದಯ ಮಾಡುವನಿರಲುಏತರ ಭಯವೋ ಹೇ ಮನುಜಾ ಪಬೆಳಗು ಬೈಗು ಮೈ ಹುಳುಕು ಹರತೆಯಲಿ |ಕೆಲವು ಕಾಲದಲಿ ಗಳಿಗೆಯಾದರೂ ||- - - - - - - - - - - - -- - - - - - - - - - - - - * 1
ಸಂಸಾರದ ಸುಖಪ್ರಾಶನ ಮಾಡದೆ |ಕಂಸಾರಿಯ ಪದಪಾಂಸುಗಳ ಭಜಿಸು ||
- - - - - - - - - - - -
- - - - - - - - - - - - * 2
ನೀರಬೊಬ್ಬಳಿಯಂತೆ ನಿತ್ಯವಲ್ಲದ ದೇಹ |ಘೋರ ಸಂಸಾರದಿ ತೊಳಲದಿರು ||ಶ್ರೀರಮಣ ಪುರಂದರವಿಠಲ ಪರನೆಂದು |ಸಾರಿದೆಯಲ್ಲವೆ ಸುಮ್ಮನಿರಬೇಡ 3


Monday, 18 May 2020

ಗಜಮುಖ ವಂದಿಸುವೆ ಕರುಣಿಸಿ ಕಾಯೊ gajamukha vandisi kayuve

ಗಜಮುಖ ವಂದಿಸುವೆ ಕರುಣಿಸಿ ಕಾಯೊ \\ಪ\\
ಗಜಮುಖ ವಂದಿಪೆ ಗಜಗೌರಿಯ ಪುತ್ರಅಜನ ಪಿತನ ಮೊಮ್ಮಗನ ಮೋಹದ ಬಾಲ\\a\\
ನೀಲಕಂಠನ ಸುತ ಬಾಲಗಣೇಶನೆಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯ
ಪರುವತನ ಪುತ್ರಿ ಪಾರ್ವತಿಯ ಕುಮಾರಗರುವಿಯಾ ಚಂದ್ರಗೆ ಸ್ಥಿರಶಾಪ ಕೊಟ್ಟನೆ\\1\\
ಮತಿಗೆಟ್ಟ ರಾವಣ ಪೂಜಿಸದೆಸೀತಾಪತಿ ಕರದಿಂದಲಿ ಹತವಾಗಿ ಪೋದನು
ವಾರಿಜನಾಭ ಶ್ರೀ ಹಯವದನನ ಪದಸೇರುವ ಮಾರ್ಗದ ದಾರಿಯ ತೋರಿಸೊ\\2\\