ಎನ್ನ ಮನದ ಡೊಂಕ ತಿದ್ದಿ-
ಚರಣದಲ್ಲಿ ಸೇರಿಸೋ |
ನಿನ್ನ ಸೇವಕನಾದ ಮೇಲೆ
ಇನ್ನು ಸಂಶಯವೇಕೆ ಕೃಷ್ಣ ಪ
ಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |
ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||
ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |
ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1
ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |
ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||
ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |
ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2
ಅಗಣಿತ ಸುಖ ಬಂದರೆ ನಾನು -
ಅಗಣಿತ ದುಃಖಕೆ ಹರಿಯೆನ್ನುವೆನು |
ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||
ಮಿಗೆ ಹಾನಿಗೆ ಹರಿಯನು ದೂಷಿಸಿ
ನೆಗೆದು ಪತಂಗವು ಕಿಚ್ಚಲಿ ಬೀಳುವ |
ಬಗೆ ನಾನಾದೆನು ಪುರಂದರ ವಿಠಲನ ಖಗರಾಜ
ಸುವಾಹನ ಶ್ರೀ ಕೃಷ್ಣ 3
No comments:
Post a Comment