Tuesday, 31 March 2020

ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮ


ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮ
ನಟ್ಟುಳಿದಶನವಾಯಿತು ಪ.
ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ
ಬಿಟ್ಟು ಮುಂದಣ ಪಥವ - ಹೇ ದೇವಾ ಅಪ
ಸತ್ಯ ಕಾಮ ಕರ್ಮವು ಧರ್ಮದ ಬಲ
ಮತ್ತೆ ಅಡಗಿಹೋಯಿತು
ಎತ್ತ ನೋಡಲು ನೀಚವೃತ್ತಿಯೆ ತುಂಬಿ
ಅತ್ಯಂತ ಪ್ರಬಲವಾಯ್ತೋ ಹೇ ದೇವಾ 1
ಹೊತ್ತು ಹೊತ್ತಿಗೆ ಹಲವು ಲಂಪಟತನದಲಿ
ಚಿತ್ತ ಚಂಚಲವಾಯಿತು
ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು
ಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2
ಪೇಳುವುದೇನಿನ್ನು ದುರ್ಜನರ ಸಂಗ
ದೋಲಾಟ ಸೊಗಸಾಯಿತು
ಕೀಳು ಮೇಲು ಮೇಲು ಕೀಳಾಗಿ ನಡೆಯುವ
ಕಾಲ ವೆಗ್ಗಳವಾಯಿತೋ ಹೇ ದೇವಾ 3
ಆಳುವ ಅರಸರಿಗೆಲ್ಲ ಕಾಂತನದಾಸೆ
ಮೇಲು ಮೇಲಾಯಿತಯ್ಯ
ನೀಲ ಮೇಘಶ್ಯಾಮ ನಿನ್ನಾಳೆಂಬರಿಗೆ
ಕೂಳು ಹುಟ್ಟದೆ ಹೋಯಿತೋ ಹೇ ದೇವಾ 4
ಅರಿಷಡ್ವರ್ಗದಲಿ ಸಿಲುಕಿ ಸುe್ಞÁನದ
ಅರಿವು ಇಲ್ಲದೆ ಹೋಯಿತು
ಕರಣಾಳು ಶ್ರೀ ಪುರಂದರವಿಠಲನೆ ನಿನ್ನ
ಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5


No comments:

Post a Comment