Monday, 30 March 2020

ಕಷ್ಟವಾವುದು ಸುಖವದಾವುದಯ್ಯ



ಕಷ್ಟವಾವುದು ಸುಖವದಾವುದಯ್ಯ ಪ.

ಹೊನ್ನಳ್ಳವಗೆ ಬಂದ ದಾರಿದ್ರ್ಯ ಬಲು ಕಷ್ಟ

ಅನ್ಯರ ಮನೆಯ ಸೇರುವುದು ಬಹುಕಷ್ಟ

ಅನ್ಯಾಯವಿರದೆ ಅಪಕೀರ್ತಿ ಹೊರುವುದು ಕಷ್ಟ

ಗನ್ನಘಾತಕವ ಮಾಡುವುದು ಕಷ್ಟವಯ್ಯ 1

ಉದ್ಯೋಗದಲಿ ಒಳ್ಳೆ ಲಾಭವಾದರೆ ಸುಖವು

ಬಧ್ಧನುಡಿ ನುಡಿಯುವುದು ಬಹಳ ಸುಖವು

ಗುದ್ದಾಟವಿರದಣ್ಣ - ತಮ್ಮರಿದ್ದರೆ ಸುಖವು

ಬುದ್ಧಿವಂತನಾಗಿ ಬಾಳುವುದು ಸುಖವಯ್ಯ 2

ಮತ್ಸರವಿರದ ಸೊಸೆಯು ಮನೆಗೆ ಬಂದರೆ ಸುಖವು

ಪುತ್ರ ತಾ ಬುದ್ಧಿವಂತನಾದರೆ ಸುಖವು

ಹಸ್ತವನು ಎತ್ತಿ ದಾನವನು ಕೊಡುವುದು ಸುಖವು

ವಸ್ತ್ರವನು ಮಾಸದುಡುವುದು ಬಹಳ ಸುಖವಯ್ಯಾ 3

ಭೂತಳದಿ ಸಮ್ಮತನು ಆಗಿ ಬಾಳ್ವದು ಸುಖವು

ಭೂತೇಶನಾ ಪ್ರೀತಿ ಬಹಳ ಸುಖವು

ನೀತಿ ನಡೆಯನು ನಡೆವುದೇ ಸುಖವು ಹಿರಿಯರ

ಮಾತುಗಳ ನಡೆಸುವುದು ಬಹಳ ಸುಖವಯ್ಯ 4

ಆಧಾರವಿಲ್ಲದಲೆ ಸಾಲ ಕೊಡುವುದು ಕಷ್ಟ

ಮಾದ ಹುಣ್ಣದು ಮತ್ತೆ ಹುಟ್ಟಿದರೆ ಕಷ್ಟ

ಹಾದಿಯನು ಬರಿಗಾಲಿನಿಂದ ನಡೆಯುವುದು ಕಷ್ಟ

ಆದಿ ಮೂರುತಿ ಪುರಂದರವಿಠಲರಾಯ 5


No comments:

Post a Comment