Monday, 30 March 2020

ಕಂಡು ಕಂಡು ನೀ ಎನ್ನ ಕೈ ಬಿಡುವರೆ


ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣ
ಪುಂಡರೀಕಾಕ್ಷ ಪುರುಷೋತ್ತಮ ಹರೇ ಪ
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನಯ್ಯ ನೀರಜಾಕ್ಷ ||
ತಂದೆ ತಾಯಿಯು ನೀನೇ ಬಂಧು ಬಳಗವು ನೀನೇ
ಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣಾ 1
ಕ್ಷಣವೊಂದು ಯುಗವಾಗಿ ತೃಣವು ಪರ್ವತವಾಗಿ
ಎಣಿಸಲಳವಲ್ಲ ಈ ಭವದ ವ್ಯಥೆಯ ||
ಸನಕಾದಿ ಮುನಿವಂದ್ಯ ವನಜಸಂಭವನಯ್ಯ
ಫಣಿಶಾಯಿ ಪ್ರಹ್ಲಾದಗೊಲಿದ ನರಹರಿಯೆ 2
ಭಕ್ತ ವತ್ಸಲನೆಂಬ ಬಿರುದು ಬೇಕಾದರೆ
ಭಕ್ತರ ಅಧೀನನಾಗಿ ಇರಬೇಡವೆ ||
ಮುಕ್ತಿದಾಯಕ ದೇವ ಹೊನ್ನೂರ ಪುರವಾಸ
ಶಕ್ತ ಪುರಂದರ ವಿಠಲ ಶ್ರೀ ಕೃಷ್ಣಾ 3


No comments:

Post a Comment