Sunday, 29 March 2020

ಎಂದೆಂದಿಗೂ ನಿನ್ನ ಪಾದವೆ ಗತಿಯೋ ಗೋ


ಎಂದೆಂದಿಗೂ ನಿನ್ನ ಪಾದವೆ ಗತಿಯೋ ಗೋ
ವಿಂದ ಬಾರೈ ಎನ್ನ ಹೃದಯ ಮಂದಿರಕೆ ಪ
ಮೊದಲಿಲ್ಲಿ ಬರಬಾರದು ನಾ ಬಂದೆ
ತುದಿಮೊದಲಿಲ್ಲದ ಭವದಿಂದ ನೊಂದೆ ||
ಇದರಿಂದ ಗೆದ್ದು ಹೋಗುವುದೆಂತು ಮುಂದೆ
ಪದುಮನಾಭನೆ ತಪ್ಪು ಕ್ಷಮೆ ಮಾಡು ತಂದೆ 1
ಹೆಣ್ಣು ಹೊನ್ನು ಮಣ್ಣಿನಾಶೆಗೆ ಬಿದ್ದು
ಪುಣ್ಯ ಪಾಪಂಗಳ ನಾನರಿತಿದ್ದು ||
ಅನ್ಯಾಯವಾಯಿತು ಇದಕೇನು ಮದ್ದು
ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು 2
ಹಿಂದೆ ನಾ ಮಾಡಿದ ಪಾಪವ ಕಳೆದು
ಮುಂದೆನ್ನ ಜನ್ಮ ಸಫಲ ಮಾಡಿ ಪೊರೆದು ||
ತಂದೆ ಶ್ರೀ ಪುರಂದರ ವಿಠಲ ನೀನಿಂದು
ಬಂದು ಸಲಹೊ ನನ್ನ ಹೃದಯದಿ ನಿಂದು 3


No comments:

Post a Comment