Tuesday, 14 January 2020

ಓಡಿ ಬಾರಯ್ಯ ಶ್ರೀ ವೈಕುಂಠಪತಿ ನಿನ್ odi baarayya shri vaikuntapathi

ಓಡಿ ಬಾರಯ್ಯ ಶ್ರೀ ವೈಕುಂಠಪತಿ ನಿನ್ನ
ನೋಡುವೆ ಮನದಣಿಯ                                          ।।ಪ॥
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ
ಪಾಡಿ ಪೊಗಳುವೆನು ಪರಮಪುರುಷ ಹರಿಯೆ                ।।ಅ.ಪ॥
ಕೆಂದಾವರೆ ಪೋಲ್ವ ಪಾದಗಳಿಂದ ರಂಗ
ಧಿಂಧಿಂ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ಘಲುಘಲುರೆನ್ನಲು
ಚಂದದಿ ಪೀತಾಂಬರ ನಲಿದಾಡುತ                           ।।೧।।
ಕೋಟಿ ಸೂರ್ಯ ಪ್ರಕಾಶದಂತೆ ಕಿ
ರೀಟ ಕುಂಡಲ ಬಾವುಲಿ ಪೊಳೆಯೆ ಲ
ಲಾಟದಿ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೊ ಈಗ                       ।।೨।।
ಎಣ್ಣೂರಿಗತಿರಸ ದಧಿ ಘೃತವೊ ರಂಗ
ಎನ್ನಯ್ಯ ನಿನಗೆ ಕೊಡುವೆ ಬಾರೊ
ಚಿಣ್ಣರ ಮೆಲುವುದು ಬೇಡ ಎನ್ನ ಕಂದ
ಬೆಣ್ಣೆಯ ಮೆಲುವುದು ಬೇಡ ಎನ್ನ ಕಂದ                      ।।೩।।
ತುರುಬಿನ ಮೇಲೆ ನಲಿಯುತಲಿರುತಿಹ
ಮರುಗ ಮಲ್ಲಿಗೆ ಜಾಜಿ ತುಳಸಿಯ ದಂಡೆ
ಕರದಲಿ ಪಿಡಿದು ಪೊಂಗೊಳಲನೆ ಊದುತ
ಸರಸದಿಂದಲಿ ನೀ ನಲಿನಲಿದಾಡುತ                         ।।೪।।
ಮಂಗಳಾತ್ಮಕ ಮೋಹನಕಾಯ ರಂಗ
ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿಪ್ರಿಯನಾದ ಶು
ಭಾಂಗ ಶ್ರೀಪುರಂದರವಿಠಲರಾಯ                           ।।೫।।

No comments:

Post a Comment