Saturday, 25 January 2020

ಇದು ನಿನಗೆ ಧರ್ಮವೇ ಇಂದಿರೇಶ idu ninage dharmave


ಇದು ನಿನಗೆ ಧರ್ಮವೇ ಇಂದಿರೇಶ
ಬದಿಗ ನೀನಾಗಿದ್ದು ಭೀತಿ ಪಡಿಸುವುದು ಪ
ನಿನ್ನ ಗುಣಗಳ ತುತಿಸಿ ನಿನ್ನನ್ನೇ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನ್ನವರನ ಈ ಪರಿಯ ಬನ್ನಬಡಿಸುವುದು 1
ದುರುಳನಲ್ಲವೊ ನಿನ್ನ ಚರಣ ಸೇವಕರವನೊ
ಪರಿಪಾಲಿಸುವುದು ನಿನ್ನ ಪರಮ ಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣ ರಕ್ಷಕನೆಂಬೊ ಬಿರಿದು ಸುಳ್ಳಾಗುತಿದೆ 2
ಶೋಕನಾಶಕ ವಿಗತಶೋಕನೆಂಬೋ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿ
ರಾಕರಿಸದೆಮ್ಮ ನೀ ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕ ರಕ್ಷಾಮಣಿಯೆ 3
ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣ ಪಾಲಕ
ಕ್ಷಣಕನಂತಪರಾಧವೆಣಿಸುವರೆ ಕಡೆಯುಂಟೆ
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ 4
ನಮೋ ನಮೋ ಬ್ರಹ್ಮಣ್ಯ ದೇವರ ದೇವ
ನಮೋ ನಮೋ ಧನ್ವಂತ್ರಿ ದುರಿತ ಹಂತ್ರೀ
ನಮೋ ನಮೋ ಕಾರುಣ್ಯ ಶೀಲ ಸಜ್ಜನ ಪಾಲಾ
ನಮೋ ನಮೋ ಜಗನ್ನಾಥವಿಠಲ ವಿಖ್ಯಾತ 5


No comments:

Post a Comment