Tuesday, 14 January 2020

ಗೋವರ್ಧನ ಗಿರಿಯನೆತ್ತಿದ ಗೊವಿಂದ govardhana giriyannettida govinda

ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ
ಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ
ಮಂಚ ಬಾರದು ಮಡದಿ ಬಾರಳು
ಕಂಚುಕನ್ನಡಿ ಬಾರವು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿರೊ ಧರ್ಮವ
ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತೃ ಯಮನವರೆಳೆದು ಒಯ್ದಾಗ
ಅರ್ಥಪುತ್ರರು ಕಾಯ್ವರೆ
ತಂದು ಬಂದರೆ ತನ್ನ ಪುರುಷನ
ಬಂದಿರಾ ಬಳಲಿದಿರಾ ಎಂಬಳು
ಒಂದು ದಿವಸ ತಾರದಿದ್ದರೆ
ಹಂದಿನಾಯಂತೆ ಬೊಗಳ್ವಳು
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣಹೋಗುವ ಸಮಯದಲ್ಲಿ
ಜಾಣೆ ಕರೆದರೆ ಬಾರಳು
ಉಂಟು ಕಾಲಕೆ ನಂಟರಿಷ್ಟರು
ಬಂಟರಾಗಿ ಕಾಯ್ದರು
ಕಂಟಕ ಯಮನವರು ಎಳೆವಾಗ
ನಂಟರಿಷ್ಟರು ಬಾರರು
ಒಡವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಗೆ
ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿಟ್ಠಲೇಶನ ಚರಣವ

No comments:

Post a Comment