Thursday, 16 January 2020

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ baaramma ele muddu

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ||
ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ
ಬಾಲಕರನು ಬಡೆವನಮ್ಮ
ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ||
ಸಣ್ಣವನಾಗಿ ತೋರುವನಮ್ಮ, ಪಾಲ್-
ಬೆಣ್ಣೆ ಮೊಸರು ಕದಿವನಮ್ಮ
ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು
ಚಿಣ್ಣಗೆ ಬುದ್ಧಿಯ ಪೇಳಮ್ಮ ||
ಇಟ್ಟ ಕಸ್ತೂರಿ ನಾಮದವನಮ್ಮ, ಅವ
ಹೊಟ್ಟೆಯೊಳಿಡಬಲ್ಲನೀ ಜಗವಮ್ಮ
ದುಷ್ಟ ಹಾವನು ತುಳಿದವನಮ್ಮ, ಗೋಪಿ
ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ ||
ಅರಳೆಲೆ ಮಾಗಾಯಿಯವನಮ್ಮ, ಹೊನ್ನ
ಬೆರಳ ರನ್ನದ ಮುದ್ರಿಕೆಯವನಮ್ಮ
ಇರುಳುಹಗಲು ನಮ್ಮ ಮರುಳು ಮಾಡಿ ಪೋದ
ತರಳಗೆ ಬುದ್ಧಿಯ ಪೇಳಮ್ಮ ||
ಮಾಯಾರೂಪಿಲಿ ಬರುವನಮ್ಮ, ಕದ್ದು
ಆವಿನ ಮೊಲೆ ಉಂಬುವನಮ್ಮ
ಮಾವನ ಕೊಂದನಿವನಮ್ಮ, ಚೆಲ್ವ
ದೇವರ ದೇವಗೆ ಬುದ್ಧಿ ಪೇಳಮ್ಮ ||
ಕಡಹದ ಮರನೇರಿದವನಮ್ಮ, ಬೆಟ್ಟ
ಕೊಡೆ ಮಾಡಿ ಹಿಡಿದು ಕಾಯ್ದವನಮ್ಮ
ಮಡದೇರಂದದಿ ರಮಿಸುವನಮ್ಮ, ಘುಡು
ಘುಡಿಸಿ ಕಂಬದಲೊಡೆವನಮ್ಮ ||
ಒಮ್ಮೆಗೆ ಈವರಿಗೊಲಿದವನಮ್ಮ, ಚೆಲ್ವ
ಬ್ರಹ್ಮದೇವರ ಪಡೆದವನಮ್ಮ
ನಮ್ಮೆಲ್ಲರ ಪೊರೆವ ಪುರಂದರ-ವಿಠಲಗೆ
ಘಮ್ಮನೆ ಬುದ್ಧಿಯ ಪೇಳಮ್ಮ ||

No comments:

Post a Comment