ಯಮ ತನ್ನ ಪುರದಿ ಸಾರಿದನು ನಮ್ಮ
ಕಮಲನಾಭನ ದಾಸರ ಮುಟ್ಟದಿರಿ ಎಂದು ಪ.
ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ
ನಿಜ ದ್ವಾದಶನಾಮ ಧರಿಸಿಪ್ಪರ ||
ತ್ರಿಜಗವಂದಿತಳಾದ ತುಳಸೀ ಮಾಲಿಕೆಯುಳ್ಳ
ಸುಜನರ ಕೆಣಕದೆ ಸುಮ್ಮನೆ ಬನ್ನಿರೊ ಎಂದು 1
ತಾಳದಂಡಿಗೆ ಗೀತವಾದ್ಯ ಸಮ್ಮೇಳದಿ
ಊಳಿಗವನು ಮಾಳ್ಪ ಹರಿದಾಸರ ||
ಕೇಳಿದೊಡನೆ ಕರವೆತ್ತಿ ಮುಗಿದು ಯಮ
ನಾಳುಗಳೆಂದು ಹೇಳದೆ ಬನ್ನಿರೊ ಎಂದು 2
ಹೆಮ್ಮೆಯ ಸಿಡಿಯೇರಿ ಬೇವಿನುಡುಗೆಯುಟ್ಟು
ಚಿಮ್ಮುತ ಚೀರುತ ಬೊಬ್ಬೆಯಿಟ್ಟು
ಕರ್ಮಕೆ ಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ
ಬ್ರಹ್ಮೇತಿಕಾರನೆಳತನ್ನಿರೋ ಎಂದು 3
ಮಾತಾಪಿತರ ದುರ್ಮತಿಯಿಂದ ಬೈವರ
ಪಾತಕಿಗಳ ಪರದ್ರೋಹಿಗಳ
ನೀತಿಯಿಲ್ಲದೆ ವಿಮೋಹಿಸಿದವರ ಬಾಯೊಳು
ಒತ್ತಿ ಸೀಸವ ಕಾಸಿ ಹೊಯ್ದು ಕೊಲ್ಲಿರಿ ಎಂದು 4
ನರರ ಹಾಡಿ ಪಾಡಿ ನರರ ಕೊಂಡಾಡುವ
ನರಕಿಗಳ ಕೀಳುನಾಯ್ಗಳ ಮನ್ನಿಸುವ
ದುರುಳ ಜ್ಞಾನಿಜನರನೆಳೆತಂದು ಬಾಯೊಳು
ಅರಗನೆ ಕಾಯಿಸಿ ಹೊಯ್ದು ಕೊಲ್ಲಿರಿ ಎಂದು 5
ಕೇಶವ ಹರಿ ಎಂಬ ದಾಸರ ಹೃದಯದಿ
ವಾಸವಾಗಿಹ ಸಿರಿ ತಿರುಮಲೇಶ
ದಾಸರ ದಾಸರ ದಾಸನೆನಿಪ ಹರಿ
ದಾಸರನ್ನು ಕೆಣಕದೆ ಬನ್ನಿರೋ ಎಂದು 6
ಅನ್ಯಮಂತ್ರವ ಬಿಟ್ಟು ದೈವಮಂತ್ರವ ಭಜಿಸಿ
ಪನ್ನಗಶಯನನೆ ಗತಿಯೆನ್ನುತ
ತನ್ನ ಭಕ್ತರ ಕಾಯ್ವ ಪುರಂದರವಿಠಲನ
ಉನ್ನತದಲಿ ನಮಸ್ಕರಿಸಿ ಬನ್ನಿರೊ ಎಂದು 7
No comments:
Post a Comment