Tuesday, 10 December 2019

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ vrundavanadlli raajipa yativaranyare

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ            || ಪ ||
ಇಂದಿರೆಯನರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ            || ಅ ||
ಮಂತ್ರಾಲಯಕೃತಮಂದಿರನೆನಿಸುವನ್ಯಾರೇ ಪೇಳಮ್ಮಯ್ಯ
ತಂತ್ರದೀಪಿಕಾ ಗ್ರಂಥಕರ್ತನ್ಯಾರೇ ಪೇಳಮ್ಮಯ್ಯ
ಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯ
ಚಿಂತಿತಫಲದ ದುರಂತಶಕ್ತ ಜಯವಂತ ನೀತ ಅಘಶಾಂತ ಕಾಣಮ್ಮ        || ೧ ||
ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೇ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯ
ಆಶುಗಮನಮತ ಸ್ಥಾಪಕನೆನಿಸುವನ್ಯಾರೇ ಪೇಳಮ್ಮಯ್ಯ
ಭಾಸುರಜ್ಞಾನ ವಿಶೇಷವಾಗಿ ಹರಿದಾಸ್ಯವ ಪಡೆದ ಯತೀಶ ಕಾಣಮ್ಮ    || ೨ ||
ಧಾರುಣಿಪತಿಸುತೆ ತೀರದಿ ನೆಲೆಸಿಹನ್ಯಾರೇ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಗೆ ಪೊರೆಯುವನ್ಯಾರೇ ಪೇಳಮ್ಮಯ್ಯ
ಕಾರುಣ್ಯನಿಧಿ ಅಪಾರ ಮಹಿಮನಿವನ್ಯಾರೇ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠ್ಠಲನ ಆರಾಧಿಪ ರಾಘವೇಂದ್ರ ಕಾಣಮ್ಮ        || ೩ ||

No comments:

Post a Comment