Tuesday, 24 December 2019

ಹರಿದಾಸರ ಸಂಗ ದೊರೆಯಿತು haridasara sanga doreyitu

ಹರಿದಾಸರ ಸಂಗ ದೊರೆಯಿತು ಎನಗೀಗ ಇನ್ನೇನಿನ್ನೇನು
ವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ಪ
ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು
ತೋಯಜಾಕ್ಷನ ನಾಮ ಜಿಹ್ವೆಯೊಳ್ನೆಲಸಿತು ಇನ್ನೇನಿನ್ನೇನು1
ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು
ಜಲಜನಾಭನ ಧ್ಯಾನ ಹೃದಯದೊಳ್ನೆಲಸಿತು ಇನ್ನೇನಿನ್ನೇನು 2
ತಂದೆ ತಾಯೆ ಮುಚುಕುಂದವರದನಾದ ಇನ್ನೇನಿನ್ನೇನು
ಸಂದೇಹವಿಲ್ಲ ಮುಕುಂದ ದಯಮಾಡಿದ ಇನ್ನೇನಿನ್ನೇನು 3
ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು 4
ಎನ್ನವಂಶಗಳೆಲ್ಲ ಪಾವನವಾದುವು ಇನ್ನೇನಿನ್ನೇನು
ಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು5

No comments:

Post a Comment