Thursday, 7 November 2019

ವೃಂದಾವನದೇವಿ ನಮೋ ನಮೋ vrundavanadevi namo namo

ವೃಂದಾವನದೇವಿ ನಮೋ ನಮೋ, ಚೆಲ್ವ
ಮಂದರಧರನ ಮನಃಪ್ರಿಯಳೆ
ವೃಂದಾವನ ದೇವಿ ನಮೋ ನಮೋ ||ಪ||

ನಿನ್ನ ಸೇವಿಸಿ ಉದಕವನೆರೆಯಲು
ಮುನ್ನ ಮಾಡಿದ ಪಾಪ ಹೋಗುವುದು
ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ
ಉನ್ನಂತ ವೈಕುಂಠ ಪದವೀವಳೆ ||

ಒಂದೊಂದು ದಳದಲ್ಲಿ ಒಂದೊಂದು ಮೂರುತಿ
ಸಂದಣಿಸುವೆ ಬಹು ಗುಪಿತದಲಿ
ಬಂದು ಕುಂಕುಮ ಶಂಖಚಕ್ರ ಧರಿಸಿದರೆ
ತಂದೆ ನಾರಾಯಣ ಕರೆದೊಯ್ಯುವ ||

ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ
ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ
ಹರಿಯು ತನ್ನವರೆಂದು ಕೈ ಪಿಡಿವ ||

ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ
ಉತ್ತಮ ವೈಕುಂಠ ಪದವೀವಳೆ
ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು
ಕರ್ತುನಾರಾಯಣ ಕರೆದೊಯ್ವನು ||

ಆವಾವಪರಿಯಲ್ಲಿ ಸೇವೆಯ ಮಾಡಲು
ಪಾವನ ವೈಕುಂಠಪದವೀವಳೆ
ದೇವ ಶ್ರೀ ಪುರಂದರವಿಠಲರಾಯನ
ದೇವಿ ನಿನ್ನ ಮುಟ್ಟಿ ತ್ರಾಹಿಯೆಂಬೆ ||

No comments:

Post a Comment