ಬಂದನಿಂದು ರಾಘವೇಂದ್ರನು ಆನಂದದಿಂದಲಿ
ಬಂದನಿಂದು ರಾಘವೇಂದ್ರನು ಪ.
ಕಂದರಾದ ಭಕ್ತ ಜನರ
ಚಂದದಿಂದ ಪೊರೆವೆನೆಂದು ಅ.ಪ.
ಪರಿಪರಿಯ ವೈಭವವನು ಪಡಲಿಬೇಕೆಂದು
ಕರದು ತರಲು ಕರಕರಿಯ
ಕರದು ಮನವ ನೋಡಬೇಕೆಂದು 1
ಕರುಣಾನಿಧಿ ಎಂದೆನಿಸಿ ನಿನಗೆ ಥರವೆ ಇದು ಎಂದು
ಪರಿಪರಿಯಲಿ ಸ್ತುತಿಸುತಿರಲು
ಸ್ಥಿರವಾರದಿ ಹರುಷ ತೋರಲು 2
ಬಂದ ಬುಧರಿಂದ ಪೂಜೆನಂದಗೈಸ ಬೇ
ಕೆಂದು ತುಂಗಜಲವ ತರುತಿರÉ
ಬಂದ ಮಾಯದಿಂದ ಹರಿಯು 3
ದ್ವಿಜರ ಹಸ್ತಜಲವ ಶ್ರೀನಿವಾಸ ಬೇಡಲು
ದ್ವಿಜರು ಕೊಡಲು ಗುರುಗಳನ್ನು
ಪೂಜೆಗೈದೆನೆಂದು ನುಡಿದ 4
ಈ ತೆರದ ಕೌತುಕವ ಶ್ರೀನಾಥ ತೋರುತ
ಆ ತಕ್ಷಣದಿ ಮಾಯವಾಗೆ
ರೀತಿಯಿಂದ ಪೂಜೆಗೈಯ್ಯಲು 5
ಮಂತ್ರಾಲಯದ ಮಂದಿರನಿಗೆ ಪಂಚಾ
ಮೃತದಿಂದ ಸಂತೋಷದಲಿ ಪೂಜೆ
ಗೈದು ಪಂಚಮೃಷ್ಟಾನ್ನ ಬಡಿಸೆ6
ಶ್ರೀನಿವಾಸ ಸಹಿತ ಶ್ರೀ ರಾಘವೇಂದ್ರರು
ಸಾನುರಾಗದಿ ಸೇವೆಕೊಂಡು
ನಾನಾ ವಿಧದ ಹರುಷಪಡಿಸೆ 7
ಎನ್ನ ಮನಕೆ ಹರುಷಕೊಡಲು ನಿನ್ನ ಭಜಿಸುವೆ
ನಿನ್ನ ಮನಕೆ ಬಾರದಿರ್ದೊಡೆ
ಮುನ್ನೆ ಪೋಗಿ ಬಾರೆಂದೆನಲು 8
ತುಂಗಮಹಿಮ ರಾಘವೇಂದ್ರರ ಮಂಗಳದ ಪುತ್ರ
ಕಂಗಳೀಗೆ ತೋರಿ ಅಂತ
ರಂಗದಲ್ಲಿ ಹರುಷವಿತ್ತು 9
ಶ್ರೀ ಗುರುಗಳ ಕರುಣದಿಂದ ರಾಘವೇಂದ್ರನು
ಭಾಗವತರ ಪೊರೆವೆನೆಂದು
ಯೋಗಿ ಶೇಷಾಂಶ ಸಹಿತ 10
ಇಂತು ರಾಘವೇಂದ್ರ ಗುರು ತಾ ಶಾಂತನಾಗುತ
ಶಾಂತ ಗೋಪಾಲಕೃಷ್ಣವಿಠ್ಠಲನ
ಅಂತರಂಗದಿ ತೋರ್ವೆನೆಂದು 11
No comments:
Post a Comment