Monday, 7 October 2019

ಊರದೇವರ ಮಾಡಬೇಕಣ್ಣ uradevara maadabekanna

ಊರದೇವರ ಮಾಡಬೇಕಣ್ಣ ತನ್ನೊಳಗೆ ತಾನೆ                               ॥ಪ॥ ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಇರುಳು ಹಗಲು

ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಭ್ರೂಮಧ್ಯದಲ್ಲಿ                            ॥ಅ.ಪ॥

ಎಷ್ಟು ಯುಗಗಳು ತೀರಿ ಹೋಯ್ತಣ್ಣ ದೇವರ ಮಾಡದೆ
ಕಷ್ಟದಿಂದ ನೊಂದೆ ಕಾಣಣ್ಣ
ಅಷ್ಟ ದಳದ ಕಂಭ ನಿಲ್ಲಿಸಿ ಕಟ್ಟಿ ಚಕ್ರಂಗಳನು ಹಾಕಿ
ಸೃಷ್ಟಿದೇವರ ತಂದು ನಿಲ್ಲಿಸಿ ದುಷ್ಟ ಕೋಣನ ಶಿರವ ತರಿದು                ॥೧॥

ಕಷ್ಟಕರ್ತವೆಂಬ ಕುರಿಯಣ್ಣ ಅದನ್ನು ತಂದು
ಕಟ್ಟಿ ತಲೆಯನು ಹೊಡೆಯಬೇಕಣ್ಣ
ಅಷ್ಟಮದದ ಕುರಿಗಳನ್ನು ಕಟ್ಟಿ ತಲೆಯನು ಚಂಡನಾಡಿ
ಅಟ್ಟಿ ತಿರುಗುವ ಕೋಳಿಯನ್ನು ಕುಟ್ಟಿ ಸೂರೆ ಹಾಕುತಲ್ಲಿ                      ॥೨॥

ನಾನು ಎಂಬುವ ಮೇಕೆ ಹೋತಣ್ಣ ಅದಕ್ಕೆ ತಕ್ಕ
ಜ್ಞಾನವೆಂಬುವ ಪೋತರಾಜಣ್ಣ
ಮಾನವೆಂಬ ಚಾಟಿ ಹೊಡೆದು ಹೀನ ಹೋತನ ಸೀಳಿ ಬಿಸುಟು
ಧ್ಯಾನ ಗುಡಿಸಲು ಸೂರೆಗೊಂಡು ತಾನೆ ಬೆಳಗುವ ಜ್ಯೋತಿ ನಿಲ್ಲಿಸಿ       ।೩॥

ನಾಳೆ ನೋಡೋಣ್ಣೆನ್ನಬೇಡಣ್ಣ ಕೇಳಣ್ಣ ನಿನ್ನ
ಬಾಳು ಅಸ್ಥಿರವೆಂದು ತಿಳಿಯಣ್ಣ
ಪಾಳ್ಯಗಾರನಂತೆ ಬಹನು ಬಾಳುವ ಕಾಲದಿ ಯಮನು
ಕೋಳಿ ಪಿಳ್ಳೆಯಾಡುವಾಗ ಹಾಳುಹದ್ದು ಒಯ್ಯುವಂತೆ                        ॥೪॥

ಹೆಂಡಿರು ಮಕ್ಕಳು ಸುಳ್ಳು ಕೇಳಣ್ಣ ನಿನ್ನ
ಮಂಡೆ ತುಂಬ ಬಳಗ ಕಾಣಣ್ಣ
ದಂಡಧಾರಿ ಯಮನು ಬಂದು ಮಂಡೆ ಮೇಲೆ ಹೊಯ್ಯುವಾಗ
ಹೆಂಡಿರು ಮಕ್ಕಳು ನಿನ್ನ ಕಂಡು ಭಂಗಬಿಡಿಸಬಲ್ಲರೇನಣ್ಣ                    ॥೫॥

ಸತ್ತ ಪೆಣವ ನೋಡುವಿಯಲ್ಲ ನೀ ಗಳಿಸಿದಂಥ
ಬುತ್ತಿನೋಡಿ ಉಬ್ಬುವಿಯಲ್ಲೊ
ಮೃತ್ಯುವಿನ ಬಾಯಿಯೊಳಗೆ ತುತ್ತು ಆಗಿ ಹೋಗಬೇಡ
ತೊತ್ತು ಆಗಿ ಗುರುವಿಗೆ ನೀ ಹತ್ತಿ ನೋಡೋ ಗುಡ್ಡವನು                      ॥೬॥

ಮುಂದೆ ಇಂಥ ಜನ್ಮ ಬರದಣ್ಣ ನೋಡಣ್ಣ ನಿನಗೆ
ಮಂದಮತಿಯು ಬೇಡ ಕಾಣಣ್ಣ
ಹಿಂದಿನ ಕಷ್ಟವ ಮರೆದು ಕಾಣಣ್ಣ
ತಂದೆ ಪುರಂದರವಿಠಲನ್ನ ಹೊಂದಲು ನೀ ಮುಕ್ತನಣ್ಣ                        ॥೭॥

No comments:

Post a Comment