Wednesday, 2 October 2019

ಸ್ತುತಿ ಮಾಡುವೆ ನಿನ್ನ ಕಾಳಿ stuti maduve ninna

ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತ ಬಾಹು ಕರಾಳವದನೆ ಚಂದಿರೆ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ
ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅ
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿ ಜಾತೆ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಹ್ರೀ
ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ
ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು
ಹತಮಾಡು ಕಾಡುವ ರೋಗಗಳಿಂದ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿ ಬೇಕು ದುರ್ಗೇ ದುರ್ಗೇ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ

No comments:

Post a Comment