Friday, 18 October 2019

ಮೂರು ನಾಮಗಳ ಧರಿಸಿದ muru naamagala dharisida

ಮೂರು ನಾಮಗಳ ಧರಿಸಿದ  ಕಾರಣವೇನು
ಸಾರಿ ಪೇಳಲೋ ಈಗಲೇ||pa||
ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರೊ ನಿನಗೆ ಮೂರು ನಾಮಗಳ |a.pa|
ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು |
ಶುದ್ಧ ಪಾದಕೆ ಎರಗಿ ಕರವ ಮುಗಿದು |
ಎದ್ದು ನೋಡಲು ನಿನ್ನ ಪಣೆಯೊಳೀಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ||1||
ಸಾಲದೆ ನಿನ್ನ ಸೌಂದರ್ಯಕ್ಕೆ ಒಂದು ತಿಲಕ |
ಪಾಲಸಾಗರಶಾಯಿ ಚೆಲುವಮೂರ್ತಿ|
ಕಾಲಕಾಲಕೆ ಬರುವ ಭಕುತಜನಗಳ ವೃಂದ |
ದೃಷ್ಟಿತಾಕುವುದೆಂಬ ತೋರುವ ಬಗೆಯೊ||2||
ಮೂರು ಲೋಕಗಳಿಹವು ಮೂರುರೂಪನ ನಾನು|
ಮೂರು ಮಾಳ್ಪೆನು ಜಗವ ಮೂರು ಗುಣದಿ |
ಮೂರು ತಾಪವಗೆದ್ದು ಮಾರ್ಗದಿ ಭಜಿಸೆ|
ಪಾರು ಮಾಡುವೆನೆಂದು ತೋರುವ ಬಗೆಯೊ ||3||
ಮೂರೆರಡು ಎರಡೊಂದು ಇಂದ್ರಿಯ ವರ್ಜಿಸಲು |
ತೋರುವನು ನಿಜರೂಪ ಭಕ್ತನೆಂದು|
ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದಗೆ |
ಮೂರುನಾಮಗಳೆ ಗತಿ ಎನುವ ಬಗೆಯೋ||4||
ಶ್ರೀಲೋಲ ಕೃಷ್ಣ ಗೋಪಾಲವಿಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೊ|
ವಾಸಶಯನ ವೆಂಕಟೇಶನೆ ಎನ್ನ ಮನಕೆ|
ಕಾಲಕಾಲಕೆ ನಿನ್ನ ಲೀಲೆಗಳ ತೋರೋ||5||

No comments:

Post a Comment