Thursday, 24 October 2019

ಇನ್ನೇನು ಗತಿ ಎನಗೆಲೊ ಹರಿಯೆ inneno gati enegalo hari

ಇನ್ನೇನು ಗತಿ ಎನಗೆಲೊ ಹರಿಯೆ |
ನೆನೆಯದೆ ಮೋಸಹೋದೆನಲ್ಲ ಪ
ಅಂಕದೊಳಾಡುವ ಶಿಶುವಿನ ಮುದ್ದಿನ |
ಬಿಂಕದ ನುಡಿಗಳ ಕೇಳುತಲಿ ||
ಕಿಂಕಿಣಿ ಧ್ವನಿಯನು ಕಿವಿಗೊಟ್ಟು ಕೇಳುತ |
ಮಂಕು ಹರಿಣನಂತೆ ಆದೆನಲ್ಲ 1
ಪರವನಿತೆಯರ ಲಾವಣ್ಯಕೆ ಲೋಚನ |
ಚರಿಸುತಲವರ ಕೂಟಕೆ ಬೆರಸಿ ||
ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |
ಎರಗಿದ ಪತಂಗದಂತಾದೆನಲ್ಲ 2
ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |
ಮಡದಿಯರಂಗಸಂಗವ ಮಾಡುತ ||
ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|
ಡಡಗಿದ ಮೂಷಕನಂತಾದೆನಲ್ಲ 3
ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |
ನಲಿದುಂಡು ಹೊಟ್ಟೆಯ ಹೊರೆಯುತಲಿ ||
ಬಲೆಯ ತುದಿಯ ಮಾಂಸಕೆ ಬಂದೆರಗುತ |
ಸಿಲುಕಿದ ವಿೂನಿ ನಂತಾದೆನಲ್ಲ 4
ಲಂಪಟನಾಗಿ ನಾರಿಯರ ಮುಖಾಬ್ಜದ |
ಸೊಂಪಿನ ಕಂಪನಾಘ್ರಾಣಿಸುತ ||
ಸಂಪಿಗೆ ಹೂವಿನ ಮೇಲೆ ಮಲಗಿ ತನ್ನ
ಸೊಂದಳಿದಳಿಯಂತೆ ನಾನಾದೆನಲ್ಲ 5
ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆ
ಮುಂತಾಗಿ ತಮ್ಮ ತಾವಲೆಯುತಿರೆ ||
ಸಂತತ ತವತಮ ವಿಷಯಕೆ ಎಳಸಲು
ಕಾಂತಾರದರಸನಂತೆ ಆದೆನಲ್ಲ 6
ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |
ತಂದು ಪಂಚೇಂದ್ರಿಯಗಳಿಗೆನ್ನಯ ||
ತಂದೆ ಪುರಂದರ ವಿಠಲನ ನೆನೆದರೆ |
ಎಂದೆಂದಿಗೂ ಭವಬಂಧನ ಬಾರದಲ್ಲ 7

No comments:

Post a Comment