Thursday, 10 October 2019

ಇಂದು ಎನಗೆ ಗೋವಿಂದ Indu Enage Govinda

ಇಂದು ಎನಗೆ ಗೋವಿಂದ ನಿನ್ನ ಪಾದಾರ-
ವಿಂದವ ತೋರೋ ಮುಕುಂದ ।।ಪ।।
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧರ ಆನಂದ ಇಂದಿರಾ ರಮಣ ।।ಅ.ಪ।।
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣೆದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ।।೧।।
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ।।೨।।
ಧಾರುಣಿಯೊಳು ಭೂಭಾರ ಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರವೇಣುಗೋಪಾಲ ಪರಗಾಣಿಸೊ ಹರಿಯೆ ।।೩।।

No comments:

Post a Comment