Wednesday, 30 October 2019

ಎಂಥ ಚೆಲುವೆಗೆ ಮಗಳನು entha cheluvege magalanu

ಎಂಥ ಚೆಲುವೆಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮ |
ಕಂತು ಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ ಪ
ಮನೆಯೆಂಬುದು ಸ್ಮಶಾನವು ನೋಡೇ
ಗಜಚರ್ಮಾಂಬರವಮ್ಮಮ್ಮ |
ಹಣವೊಂದೆಂಬುದು ಕೈಯೊಳಗಿಲ್ಲವು
ಕಪ್ಪರವಿದೆ ನೋಡಮ್ಮಮ್ಮ 1
ಮೋರೆಗಳೈದು-ಮೂರು ಕಣ್ಣಗಳು
ವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆ ಉರಗ
ಭೂಷಣವನು ನೋಡಮ್ಮಮ್ಮ2
ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳಕರವು
ಹರನ ನೋಡಮ್ಮಮ್ಮ 3
ತಲೆಯೆಂಬುದು ನೋಡಿದರೆ ಜಡೆಯು
ಹೊಳೆಯುತಿದೆ ನೋಡಮ್ಮಮ್ಮ
ಹಲವು ಕಾಲದ ತಪಸಿ ರುದ್ರನ
ಮೈಬೂದಿಯು ನೋಡಮ್ಮಮ್ಮ 4
ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ |
ಇಂದಿರೆರಮಣನ ಪುರಂದರವಿಠಲನ
ಹೊಂದಿದವನ ನೋಡಮ್ಮಮ್ಮ 5

No comments:

Post a Comment