Friday, 18 October 2019

ಚಿಂತೆಯನು ಮಾಡದಿರು chinteyanu maadadiro

ಚಿಂತೆಯನು ಮಾಡದಿರು ಚದುರೆ ನಿನಗೆ ನಾನು
ಕಂತುಪಿತನನು ತೋರುವೆ ||ಪ||
ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು
ನಿಂತು ಬಾಗಿಲೊಳು ನೋಡೆ ಪಾಡೆ ||ಅ.ಪ||
ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು
ಮಂದಹಾಸದಲಿ ನಲಿದು
ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ
ನಂದದಿಂದವನ ಮೆಚ್ಚಿ
ಅಂದವಾದ ಕುಸುಮಹಾರವನು ಸುಖನಿಧಿಗೆ
ಕಂಧರದಿ ನೀಡಿ ನೋಡಿ
ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ
ಎಂದೆಂದಿಗಗಲದಿರೆನ್ನೆ ರನ್ನೆ ||೧||
ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ-
ಯೂಟಗಳನುಣ್ಣಿಸಿ
ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು
ವಾಸನೆಗಳನೆ ತೊಟ್ಟು
ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು
ಶ್ರೀಶನ್ನ ಮರೆಯ ಹೊಕ್ಕು
ಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿ
ವಾಸವಾಗು ಬಿಡದೆ ಎನ್ನೆ ರನ್ನೆ ||೨||
ಇಂತು ಈ ಪರಿಯಲಿ ಶ್ರೀಕಾಂತನನು ಕೂಡಿ ಏ-
ಕಾಂತದಲಿ ರತಿಯ ಮಾಡಿ
ಸಂತೋಷವನು ಪಡಿಸಿ ಸಕಲಭೋಗವ ತಿಳಿಸಿ
ಸಂತತ ಸ್ನೇಹ ಬೆಳೆಸಿ
ಅಂತರಂಗಕೆ ಹಚ್ಚಿ ಅವನಾಗಿ ತಾ ಮೆಚ್ಚಿ
ಪ್ರೀತಿಯಿಂದಧರ ಕಚ್ಚಿ
ಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲ
ಇಂತು ನಿನ್ನಗಲ ಕಾಣೆ-ಜಾಣೆ ||೩||

No comments:

Post a Comment