Saturday, 19 October 2019

ಅನುದಿನದಲಿ anudinadalli

ಅನುದಿನದಲಿ ಬಂದು ತನುವ ಸೂರೆಯಗೊಂಡು |
ಎನಗೊಂದು ಮಾತ ಪೇಳೊ ಜೀವವೆ ! ಪ
ಘನಕೋಪದಲಿ ಬಂದು ಯಮನವರಳೆದೊಯ್ವಾಗ |
ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪ
ಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ |
ನಿಲ್ಲೊ ಮಾತನಾಡತೇನೆ ಜೀವವೆ ||
ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |
ಬೆಲ್ಲ ಬೇವಾಯಿತಲ್ಲೋ ಕಾಯವೆ ! 1
ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |
ದಿಕ್ಕೆಟ್ಟು ಹೋಗುತೀಯೋ ಜೀವವೆ ||
ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |
ಸಕ್ಕರೆ ವಿಷವಾಯ್ತೋ ಕಾಯವೆ ! 2
ಅಂದಣದೈಶ್ವರ್ಯ ದಂಡಿಗೆ - ಪಲ್ಲಕ್ಕಿ |
ಮಂದಗಮನೆಯರು ಜೀವವೆ ||
ಮಂದಗಮನೆ ಯಾರೊ - ಮಡದಿ - ಮಕ್ಕಳು ಯಾರೋ -
ಬಂದಂತೆ ಹೋಗ್ತೀನಿ ಕಾಯವೆ ! 3
ಸೋರುವ ಮನೆಯಲಿ ಧ್ಯಾನ - ಮೌನಾದಿಗಳು |
ಬೇರಿತ್ತು ನಿನ್ನ ಮನಸು ಜೀವವೆ ||
ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |
ಯಾರಿಗೆ ಯಾರಿಲ್ಲ ಕಾಯವೆ ! 4
ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |
ಇಟ್ಟದ್ದು ಈ ಊರು ಜೀವವೆ ||
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |
ಗಟ್ಟ ಪೂಜೆಯ ಮಾಡೊ ಕಾಯವೆ ! 5

No comments:

Post a Comment