Tuesday, 22 October 2019

ಆವಪರಿಯಲಿ ನಿನ್ನನೊಲಿಸಿ Aavapariyali ninnanolisi

ಆವಪರಿಯಲಿ ನಿನ್ನನೊಲಿಸಿ ಮೆಚ್ಚಿಪ ವಿಧವು |ಅಣು ಮಾತ್ರ ತೋರದಲ್ಲ ಪದೇವ ದೇವೇಶ ನೀನೆಂದು ನಂಬಿರಲು ಕೃಪಾವಲೋಕನದಿ ಸಲಹೊ-ದೇವ ಅ.ಪಫಣಿರಾಜನಾಸನದಿ ಮಲಗಿದವಗೆ ಅರಿವೆಯಾಸನವೆಂತು ನಾ ಹಾಸಲಿ |ಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿ ||ತನುವಿನಾ ಪರಿಮಳವು ಘಮಘಮಿಪನಿಗೆ ಸುಚಂದನವೆಂತು ನಾ ಪೂಸಲಿ |ಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ-ದೇವ 1
ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯ ಅರಿವೆ ಏನನು ಪೊದಿಸಲಿ?ವರ ಕೌಸ್ತುಭವು ಕೊರಳಿನೊಳಗೆ ಇಪ್ಪವಗೆ ಆಭರಣವಾವುದ ತೊಡಿಸಲಿ?ತರಣಿಶತ ಕೋಟಿ ತೇಜನ ಮುಂದೆ ಹೇಗೆ ನಾ ಪೆರತೊಂದು ದೀಪವಿಡಲಿ?ನೆರಹಿದಾ ಫಣಿಪತಿಯ ಸ್ತೋತ್ರದೂರನ ನಾನು ಸ್ಮರಿಪೆನಂತಯ್ಯ ದೇವ, ದೇವ 2
ವನಜಜಾಂಡದ ಕೋಟಿಯುದರಂಗೆ ಆವುದನು ಉಣಿಸಿ ತೃಪ್ತಿಯ ಮಾಡಲಿ? |ಅನಿಮಿಷರಿಗಮೃತವನ್ನೆರೆದವನ ತೃಷೆಯ ನೀರಿನೊಳೆಂತು ಸಂತವಿಡಲಿ? ||ವಿನತೆಯಾತ್ಮಜಪಕ್ಷದ ನಿಲನಿರೆ ಬೇರೆ ಬೀಸಣಿಗೆಯಿನ್ನೇಂ ಬೀಸಲಿ |ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದಕ್ಷಿಣೆಯೆಂತು ಸುತ್ತಿ ಬರಲಿ-ದೇವ 3
ಮಿಗೆ ಫಣಿಯ ಫಣದಾತಪತ್ರ ವಿರುವವಗೆ ನೆರಳಿಗೆ ಕೊಡೆಯನೇಂ ಪಿಡಿಯಲಿ |ಪಗಲಿರುಳು ಸಾಮಗಾನಪ್ರಿಯನ ಮುಂದೆ ಗೀತಗಳ ನಾನೇಂ ಪಾಡಲಿ ||ಜಗವರಿಯೆ ಲಕ್ಷ್ಮಿದೇವಿಪತಿಗೆ ಎಷ್ಯು ಹೊನ್ನುಗಳ ದಕ್ಷಿಣೆಯ ಕೊಡಲಿ |ನಿಗಮ ತತಿ ಕಾಣದ ಮಹಾಮಹಿಮನನು ನಮಿಪ ಬಗೆಯ ನಾನರಿವೆನೆಂತೈ-ದೇವ4
ಒಲಿಸುವುದನರಿಯೆ ಮೆಚ್ಚಿಸುವ ಬಗೆಯನರಿಯೆ ಹೊಗಳುಹ ಹೊಲಬನ್ನರಿಯೆನು |ತಿಳಿದುದಿಲ್ಲವು ಷೋಡಶೋಪಚಾರದ ಪೂಜೆಗಳಲೊಂದು ಪರಿಯಾದರೂ ||ನೆಲೆಯ ಕಾಣೆನು ನಿಗಮ ಶಾಸ್ರ್ತ ನವವಿಧ ಭಕ್ತಿಯೊಳಗೊಂದು ಬಗೆಯಾದರೂ ||ಅಳಿಲು ಸೇವೆಯನೊಪ್ಪಿಕೊಂಡು ಸಲಹೈ ಪುರಂದರ ವಿಠಲನೇ ಸ್ವಾಮಿ-ಪ್ರೇಮಿ 5

No comments:

Post a Comment