Monday, 21 October 2019

ಆರು ಬಾರರು ಸಂಗಡಲೊಬ್ಬರು | Aaru bararu sangadalobbaru

ಆರು ಬಾರರು ಸಂಗಡಲೊಬ್ಬರು |
ನಾರಾಯಣನ ದಿವ್ಯನಾಮ ಒಂದಲ್ಲದೆ ಪ
ಹೊತ್ತು ನವಮಾಸ ಪರಿಯಂತ ಗರ್ಭದಲಿ |
ಅತ್ಯಂತ ನೋವು ಬೇನೆಗಳ ತಿಂದು ||
ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |
ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1
ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |
ಕರವಿಡಿದು ಕೈಧಾರೆ ಎರಸಿಕೊಂಡ ||
ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |
ನೆರೆ ಏನು ಗತಿ ತನಗೆ ಹೇಳಲಮ್ಮಳಲ್ಲದೆ 2
ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |
ಘನವಾಗಿ ನಂಬಿರೆ ನನ್ನವೆಂದು |
ಅನುಮಾನವೇತಕೆ ಜೀವ ಹೋದಬಳಿಕ |
ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3
ಆತ್ಮ ಬಳಲಿದಾಗ ಬಂಧುಗಳು ಬಂದು |
ಹೊತ್ತು ಹೊರಗೆ ಹಾಕು ಎಂತೆಂಬರು ||
ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |
ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4
ಹರಣ ಹೋಗದ ಮುನ್ನ ಹರಿಯ ಸೇವೆ ಮಾಡಿ |
ಪರಲೋಕ ಸಾಯುಜ್ಯ ಪಡೆದುಕೊಂಡು |
ಕರುಣಿ ಕೃಪಾಳು ಶ್ರೀ ಪುರಂದರವಿಠಲನ |
ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ5

No comments:

Post a Comment