ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |
ಈಗ ನೀ ಕಾಯ್ದರೇನು ಕಾಯದಿದ್ದರೇನು ಪ
ಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |
ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||
ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |
ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1
ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |
ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||
ಕಂಠಕೆ ಹೊದ್ದಿದ ಕಾಂತೆಯರೆನಗುಂಟು |
ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2
ಒಂದು ಕ್ಷಣ ಮೊದಲಾದ ವಾತ ಘಾತಗಳಿಂದ |
ಅಂದಿನ ವ್ಯಾಧಿಗಳು ಬಾಧಿಸುತಿರಲು ||
ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |
ಬಂದಿನ್ನು ಕಾಯಬೇಕೊ ಪುರಂದರವಿಠಲ3
No comments:
Post a Comment