Wednesday, 25 September 2019

ಪಾಂಡವರ ಸಾವಿನ ರಹಸ್ಯ Death of Pandavas

ಪಾಂಡವರ ಸಾವಿನ ರಹಸ್ಯ ಕೊನೆಗೂ ಬಯಲು…! ಪಾಂಡವರ ಸಾವು ಹೇಗಿತ್ತು ಗೊತ್ತಾ..?

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರು ಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ“..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.

“ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..

ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ಧಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!

ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.

ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:”ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!?”
ಧರ್ಮರಾಜ ಉತ್ತರಿಸಿದ, “ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು. ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು”

ಮತ್ತೆ ಕುಸಿದವನು ನಕುಲ, ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ”ವಾಯಿತೆಂದು ಧರ್ಮರಾಜ ಉತ್ತರಿಸಿದ.

ಮತ್ತೆ ಮೃತ್ಯುವಿನ ಸರದಿ ಅರ್ಜುನದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:”ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು?”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”

ಮಹಾಪ್ರಸ್ಥಾನ ಮುಂದುವರೆಯಿತು..

ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ?”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ – ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”

ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.

“ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂದ” ಧರ್ಮರಾಜ.
“ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.

ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.

“ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು.”

ಚಕಿತನಾದ ಇಂದ್ರ ಹೇಳಿದ, “ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ“.

“ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!

ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?

ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?

ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನದಲ್ಲಿ ಧರ್ಮ ನಿಂತಿತ್ತು..!!

ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು, ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊಂಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!

ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?

*ಬದುಕೆಂಬುದು ಮರಣದೆಡೆಗಿನ ನಿರಂತರ ಪಯಣ..*
*ಬದುಕೆಂಬುದು ಮರಣದ ಸಿದ್ಧತೆ ಮಾತ್ರ..!!*
*ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..*
*ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..*
*ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ…ಕೂಡಿಕೊಳ್ಳುತ್ತಲೇ ಇರುತ್ತದೆ..*
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?

ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?

ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿ ಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …

ಭೋಜರಾಜನ ಜೀವನಸಂದೇಶವನ್ನು ಗಮನಿಸಿ:

ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||

(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನ ಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)

*ಧರ್ಮವಿರುವಲ್ಲಿ ಸಾವಿಲ್ಲ ,ನೋವಿಲ್ಲ.. ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ .. ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು..!!*

…ಧರ್ಮೋ ರಕ್ಷತಿ ರಕ್ಷಿತಃ …
: ಸಂಗ್ರಹ ದಯವಿಟ್ಟು ಅಳಿಸಿ ಹಾಕದೆ ಬಿಡುವು ಮಾಡಿಕೊಂಡು ಓದಿ.. ಇದೇ ಮನವಿ ಪ್ಲೀಸ್

No comments:

Post a Comment