Friday, 27 September 2019

ಬಲಿಪಾಡ್ಯಮಿ Balipadyami


ಬಲಿಪಾಡ್ಯಮಿ


ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ |
ಇಂದ್ರಶತ್ರೋ ಅಮರಾವತೇ ವಿಷ್ಣುಸಾನ್ನಿಧ್ಯತೋ ಭವ |
बलिराज नमस्तुभ्यं दैत्यदानव वंदित ।
इंद्रशत्रो अमरावते विष्णुसान्निध्यतो भव ।

ಬಲಿಪಾಡ್ಯಮಿಯ ವಿಶೇಷತೆ ಏನು ?
ಪರಮಾತ್ಮನು ಕಶ್ಯಪ ಅದಿತಿಗಳ ಪ್ರಾರ್ಥನೆಯಂತೆ ಅವರ ಮಗನಾಗಿ ವಾಮನನಾಗಿ ಅವತರಿಸಿ, ಇಂದ್ರಾದಿ ದೇವತೆಗಳಿಗೆ ಕಂಟಕನಾಗಿದ್ದ ದೈತ್ಯಚಕ್ರವರ್ತಿ ಬಲಿಚಕ್ರವರ್ತಿಯನ್ನು ನಿಗ್ರಹಿಸಿ, ಅವನಿಂದ ಮೂರು ಹೆಜ್ಜೆ ದಾನ ಪಡೆದು ಅವನನ್ನು ಸುತಳ ಲೋಕಕ್ಕೆ ಅಟ್ಟಿ, ಅಲ್ಲಿ ಅವನ ಮನೆ ಬಾಗಿಲಲ್ಲೇ ನಿಂತ ದಿನವೇ ಬಲಿಪಾಡ್ಯಮಿ. ಇದನ್ನು ಕಾರ್ತೀಕ ಶುದ್ಧ ಪ್ರತಿಪತ್ ದಿನದಂದು ಆಚರಿಸಲಾಗುತ್ತದೆ. ಬಲಿಯ ಪ್ರಾರ್ಥನೆಯಂತೆ ಈ ದಿನವನ್ನು ಅವನ ಹೆಸರಿನಿಂದ ಪ್ರಖ್ಯಾತಿಗೊಳಿಸಿ ಅನುಗ್ರಹಿಸಿದ ವಾಮನರೂಪಿ ಹರಿಯು. ಈ ದಿನದಂದು ವಿಶೇಷ ಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗಿಲ್ಲ. ಸ್ವಯಂಸಿದ್ಧ 3½ ಮುಹೂರ್ತಗಳಲ್ಲಿ ಅರ್ಧ ಮುಹೂರ್ತ ಬಲಿಪಾಡ್ಯಮಿಯೆಂದು ಪ್ರಸಿದ್ಧ. ಉಳಿದ ಮೂರು ಮುಹೂರ್ತಗಳು ವಿಜಯದಶಮಿ, ಅಕ್ಷಯತೃತೀಯ, ಮತ್ತು ಯುಗಾದಿ. ಬಲಿಪಾಡ್ಯಮಿಯಂದು ಅರ್ಧದಿನದವರೆಗೂ ಸ್ವಯಂಸಿದ್ಧ ಮುಹೂರ್ತವಾಗಿದ್ದು, ಇಂದೂ ಕೂಡ ತೈಲಾಭ್ಯಂಜನವನ್ನು ಮಾಡಬೇಕು. ಮತ್ತು ಈ ದಿನ ದೀಪದಾನ, ಗೋದಾನ, ವಸ್ತ್ರದಾನ, ಮಂಗಳವಸ್ತ್ರಗಳ ದಾನ ಮಾಡಿದರೆ ವಾಮನ ರೂಪಿ ಪರಮಾತ್ಮನು ಸುಪ್ರೀತನಾಗುತ್ತಾನೆ. ಈದಿನ ದೀಪಪ್ರಜ್ವಲವನ್ನು ಮಾಡುವುದರಿಂದ ಲಕ್ಷ್ಮೀದೇವಿಯು ಸುಪ್ರೀತಳಾಗಿ ಸ್ಥಿರವಾಗಿ ನೆಲೆಸುತ್ತಾಳೆ.


ಯಾರು ಈ ಬಲಿಚಕ್ರವರ್ತಿ –
ಯಾರು ಈ ಬಲಿಚಕ್ರವರ್ತಿ – ಕಶ್ಯಪ ದಿತಿಗಳ ವಂಶದಲ್ಲಿ ಬಂದ ಪ್ರಹ್ಲಾದರಾಜರ ಮೊಮ್ಮಗನೇ ಈ ಬಲಿಚಕ್ರವರ್ತಿ. ಹಿರಣ್ಯಕಶಿಪುವಿನ ಮಗ ಪ್ರಹ್ಲಾದರಾಜರು – ಅವರ ಮಗ ವಿರೋಚನ – ಅವರ ಮಗನೇ ಬಲಿಚಕ್ರವರ್ತಿ. ಬಲಿಯ ಮಗ ಬಾಣಾಸುರ. ಬಲಿಯ ನಿಜವಾದ ಹೆಸರು ಇಂದ್ರಸೇನ. ಇವನು ದೈತ್ಯಕುಲದಲ್ಲಿ ಹುಟ್ಟಿದ್ದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಟೆ ಮತ್ತು ದಾನದಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮುದ್ರಮಥನ ಕಾಲದಲ್ಲಿ ದೈತ್ಯರ ಗುಂಪಿನ ನಾಯಕನಾಗಿದ್ದವನು ಈ ಬಲಿಚಕ್ರವರ್ತಿಯೇ.  ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುವವನು ಈ ಬಲಿಯೇ.
ಬಲಿಚಕ್ರವರ್ತಿಯು ಇಡೀ ವಿಶ್ವವನ್ನೇ ತನ್ನ ಹದಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಇಂದ್ರಲೋಕವನ್ನೂ ಆಕ್ರಮಿಸಿ, ಇಂದ್ರನನ್ನು ಕೆಳಗಿಳಿಸಿದನು. ತಾನೇ ಇಂದ್ರನಾಗಲು ಉದ್ಯುಕ್ತನಾಗಿ, 100 ಅಶ್ವಮೇಧ ಯಾಗವನ್ನು ಮಾಡಲು ಆರಂಭಿಸಿ, 99 ಯಾಗವನ್ನು ಪೂರೈಸಿದನು. 100ನೇ ಯಾಗವನ್ನು ದೈತ್ಯಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಆರಂಭಿಸಿದನು. ಆಗ ಇಂದ್ರನಾಗಿದ್ದ ಪುರಂದರನೆಂಬ ಇಂದ್ರನು ತನ್ನ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು. ಅದೇ ಸಂದರ್ಭದಲ್ಲಿ ಅದಿತಿಯೂ ಪರಮಾತ್ಮನನ್ನು ತನ್ನ ಮಗನಾದ ಪುರಂದರನಿಗೆ ಇಂದ್ರಪದವಿಯನ್ನು ಉಳಿಸಿಕೊಡಲು ಪ್ರಾರ್ಥಿಸಿ, ಕಠಿಣ ವ್ರತಗಳ ಮಾಡಲು, ಅವರ ಪ್ರಾರ್ಥನೆಯಂತೆ, ದೇವತೆಗಳ ಪ್ರಾರ್ಥನೆಯಂತೆ, ದುಷ್ಟ ಬಲಿಯ ನಿಗ್ರಹಿಸಲು ಕಶ್ಯಪ ಅದಿತಿಗಳ ಮಗನಾಗಿ ಜನಿಸಿದನು.
ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನರೂಪಿ ಪರಮಾತ್ಮನು ಯಾಗ ಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು. ವಾಮನನಾದರೋ ನನಗೆ ಏನೂ ಬೇಡ, ಕೇವಲ ತನ್ನ ಮೂರು ಹೆಜ್ಜೆ ಭೂಮಿಯನ್ನು ನೀಡಿದರೆ ಸಾಕೆನಲು, ಗುರು ಶುಕ್ರಾಚಾರ್ಯರು ಎಚ್ಚರಿಸಿದರೂ ಕೇಳದೆ ಆ ಮೂರು ಹೆಜ್ಜೆ ಭೂಮಿಯನ್ನು ನೀಡಲು ಉದ್ಯುಕ್ತನಾದನು. ತನ್ನ ಮೊದಲ ಹೆಜ್ಜೆಯಿಂದ ಪರಮಾತ್ಮನು ಇಡೀ ಭೂಲೋಕವನ್ನೇ ಆಕ್ರಮಿಸಿ, ತನ್ನ ಎರಡನೇ ಹೆಜ್ಜೆಯಿಂದ ತ್ರಿವಿಕ್ರಮನಾಗಿ ಬೆಳೆದು, ಆಕಾಶವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರಿದ ಬಲಿಚಕ್ರವರ್ತಿ. ಬ್ರಹ್ಮದೇವರಿಂದ ಪ್ರಾರ್ಥಿತನಾದ ಪರಮಾತ್ಮನು ತನ್ನ ಪಾದಕಮಲವನ್ನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿ, ಅಲ್ಲಿ ತನ್ನದೇ ಒಂದು ರೂಪದಿಂದ – ಉಪೇಂದ್ರರೂಪದಿಂದ ಈಗಲೂ ಬಲಿಯ ಮನೆ ಕಾಯುತಿಹನು, ಮತ್ತು ಅವನಿಗೆ ಮುಂದಿನ ಮನ್ವಂತರದಲ್ಲಿ ನೀನೇ ಇಂದ್ರನಾಗೆಂದು ಅನುಗ್ರಹಿಸಿದನು.


ಬಲಿಪಾಡ್ಯಮಿ ಮಾಡಬೇಕಾದ್ದು –
ಅಭ್ಯಂಜನ ಸ್ನಾನ. ಯಥಾ ಶಕ್ತಿ ದಾನ ಮಾಡಬೇಕು. ದೀಪ ಪ್ರಜ್ವಲನ, ಮತ್ತು ದೀಪ ದಾನ / ವಸ್ತ್ರ ದಾನ, ಮಂಗಳ ವಸ್ತ್ರ ದಾನ ಮಾಡಬೇಕು.
ಬಲಿಪೂಜಾಕ್ರಮ –
ರಂಗೋಲಿಯಿಂದ ಬಲಿಪ್ರತಿಮೆ ಚಿತ್ರವನ್ನು ಬರೆಯಬೇಕು
ಅಥವಾ ಗೋಮಯದಿಂದ ಚಿತ್ರವನ್ನು ಬರೆಯಬಹುದು.
ಆಚಮನ, ಪ್ರಾಣಾನಾಯಮ್ಯ,
ನಂತರ ಬಲಿಯನ್ನು ಮತ್ತು ಅವನ ಅಂತರ್ಗತನಾದ ವಾಮನರೂಪಿ ಪರಮಾತ್ಮನನ್ನೂ ಆವಾಹಿಸಬೇಕು.
ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ |
ಇಂದ್ರಶತ್ರೋ ಅಮರಾರಾತೇ ವಿಷ್ಣುಸಾನ್ನಿಧ್ಯದೋ ಬವ: ||
ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ: |
ಭವಿಷ್ಯೇಂದ್ರ ಸುರಾರಾತೇ ಪೂಜೋಽಯಂ ಪ್ರತಿಗೃಹ್ಯತಾಂ

No comments:

Post a Comment